Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

Monday, September 06, 2021

ಆದರ್ಶ್ ಮತ್ತು ಆಕಾಶ್ ಇಬ್ಬರು ಅಣ್ಣ ತಮ್ಮಂದಿರು, ಇವರಿಬ್ಬರ ಮುದ್ದಿನ ತಂಗಿ ಅಮೃತ. ಅಣ್ಣಂದಿರಿಗೆ ತಂಗಿ ಅಂದರೆ ಪಂಚಪ್ರಾಣ ಆದರೆ ತಂಗಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ ಕಾಳಜಿ ಏನೂ ಇರಲಿಲ್ಲ, ಅವಳಿಗೆ ತನ್ನ ಬಗ್ಗೆ ಮಾತ್ರ ಆಲೋಚನೆ. ಅಪ್ಪ ಅಮ್ಮ ಮೇಲೂ ಅಷ್ಟೊಂದು ಪ್ರೀತಿ ಕಾಳಜಿ ಇರಲಿಲ್ಲ. 

ಅಮೃತ ನೋಡುವುದಕ್ಕೆ ತುಂಬಾ ಸುಂದರವಾಗಿ ಇದ್ದಳು ತುಂಬಾ ಜಾಣೆ, ತರಗತಿಯಲ್ಲಿ ಆಕೆಯೇ ಎಲ್ಲದರಲ್ಲೂ ಪ್ರಥಮ. ಎಲ್ಲವು ತನ್ನಿಂದಲೇ ಅನ್ನುವ ಜಂಬ ಆಕೆಗೆ. ತಮ್ಮ ತಂಗಿಯ ಚರುಕುತನ ನೋಡಿ ಅಣ್ಣಂದಿರಿಗೆ ತುಂಬಾ ಖುಷಿ, ಆಕೆಗೆ ಏನು ಬೇಕಿದ್ದರೂ ಅದನ್ನು ತಂದುಕೊಡುತ್ತಿದ್ದರು. ಅಮೃತ ತನಗೆ ಏನಾದರು ಬೇಕಾದಾಗ ಮಾತ್ರ ಅವರ ಹತ್ತಿರ ಮಾತನಾಡುತ್ತಿದ್ದಳು ಬೇರೆ ಸಮಯದಲ್ಲಿ ಅವರ ಕಡೆ ನೋಡುತ್ತಲೇ ಇರಲಿಲ್ಲ ಆಕೆ ಹೀಗಿದ್ದರೂ ಕೂಡ ಅಣ್ಣಂದಿರಿಗೆ ಅವಳ ಮೇಲೆ ಯಾವ ಕೋಪ ಬೇಜಾರು ಇರಲಿಲ್ಲ. ಅಮ್ಮ ಆಕೆಗೆ ಎಷ್ಟು ಬುದ್ಧಿಮಾತು ಹೇಳುತ್ತಿದ್ದರೂ ಆಕೆ ಅದಕ್ಕೆಲ್ಲ ಕಿವಿಗೊಡುತ್ತಿರಲಿಲ್ಲ. 

ಒಂದು ಬಾರಿ ಪರೀಕ್ಷೆಯಲ್ಲಿ ಅಮೃತಳಿಗಿಂತ ಅವಳ ಸ್ನೇಹಿತೆಗೆ ಜಾಸ್ತಿ ಅಂಕ ಸಿಕ್ಕಿತ್ತು ಅದೇ ಮೊದಲ ಬಾರಿಗೆ ಅವಳು ತರಗತಿಗೆ ದ್ವಿತೀಯ ಸ್ಥಾನ ಪಡೆದಿದ್ದು ಇಲ್ಲ ಅಂದರೆ ಯಾವಾಗಲೂ ಅವಳೇ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ಅಂದು ಆಕೆ ಕೋಪದಿಂದ ಮನೆಗೆ ಬಂದು ಊಟ ಮಾಡದೇ ಅಳುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಎಷ್ಟು ಹೇಳಿದರು ಅವರ ಮಾತು ಕೇಳಲಿಲ್ಲ ಆದರ್ಶ್ ಏನೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಆಕಾಶ್ ಆಕೆಗೆ ಪ್ರೀತಿಯಿಂದ ಸಮಾಧಾನ ಮಾಡಲು ಯತ್ನಿಸಿದ ಆದರೆ ಆಕೆ ಅಳುತ್ತಲೇ ಕೂತಿದ್ದಳು ಅಲ್ಲದೇ ಅಣ್ಣ ಎಂದು ನೋಡದೆ ಎದುರು ಮಾತನಾಡಿಬಿಟ್ಟಳು. ಆಕಾಶ್ ಸ್ವಲ್ಪ ಮುಂಗೋಪಿ ಆಗಿದ್ದರು ಕೂಡ ತನ್ನ ತಂಗಿಯ ಬಳಿ ಕೋಪ ತೋರಿಸಿಕೊಂಡಿರಲಿಲ್ಲ ಆದರೆ ಆ ದಿನ ಆಕೆ ಏಷ್ಟು ಹೇಳಿದರೂ ಸಮಾಧಾನವಾಗಲಿಲ್ಲ ಈ ಕಡೆ ಆಕಾಶ್ ಕೋಪ ನೆತ್ತಿಗೇರಿತ್ತು ಆದರೂ ಅದನ್ನು ಸಹಿಸಿಕೊಂಡು ಅಳುತ್ತಾ ಆಚೆ ಬಂದು ತನ್ನ ಅಣ್ಣ ಆದರ್ಶನಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ. ಆತನ ಧ್ವನಿಯಲ್ಲಿ ಅವನ ದುಃಖ ಅಣ್ಣನಿಗೆ ಅರ್ಥವಾಗಿತ್ತು. ಆದರ್ಶ್ ತನ್ನ ಕೆಲಸ ಬಿಟ್ಟು ಬೇರೆ ಊರಿಂದ ಮನೆಗೆ ಬಂದ ಆತನಿಗೂ ಕೋಪ ಬೇಜಾರು ಆಗಿತ್ತು. ಅದಾದ ಮೇಲೆ ಅವರು ತಂಗಿಯ ಜೊತೆ ಮಾತು ಬಿಟ್ಟಿದ್ದರು ಸಮಯವೇ ಆಕೆಗೆ ಬುದ್ಧಿ ಕಲಿಸಬೇಕು ಆಗ ಅವಳಿಗೆ ಎಲ್ಲದರ ಅರಿವು ಆಗುತ್ತದೆ ಎಂದು ಇಬ್ಬರೂ ಸುಮ್ಮನಾಗಿದ್ದರು.

ಅಣ್ಣಂದಿರು ಮಾತು ಬಿಟ್ಟಿದ್ದಕ್ಕೆ ಅವಳಿಗೆ ಬೇಜಾರು ಆಗಲಿಲ್ಲ ಅವಳು ಮೊದಲಿನಂತೆ ತನ್ನ ಪಾಡಿಗೆ ಆರಾಮಾಗಿ ಇದ್ದಳು. ಆದರೆ ಆದರ್ಶ್ ಮತ್ತು ಆಕಾಶ್ ಮಾತ್ರ ತಮ್ಮ ತಂಗಿ ಬಂದು ಮಾತನಾಡುತ್ತಾಳೆ ಅವಳಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದುಕೊಂಡಿದ್ದರು. ಇಂತಹ ಅಣ್ಣಂದಿರು ಸಿಗುವುದಕ್ಕೆ ಎಷ್ಟು ಪುಣ್ಯ ಮಾಡಿರಬೇಕು ಆದರೆ ಅಣ್ಣಂದಿರ ಪ್ರೀತಿ ಕಾಳಜಿ ಆಕೆಗೆ ಅರ್ಥವೇ ಆಗುತ್ತಿರಲಿಲ್ಲ. 

ತಮ್ಮ ಮಗಳ ವರ್ತನೆಯಿಂದ ಅಪ್ಪ ಅಮ್ಮಗೂ ಕೂಡ ಬೇಜಾರು. ಎಷ್ಟು ಜಾಣೆ ಆದರೇನು ಈ ತರಹ ವರ್ತನೆ ಜಂಬ, ಸೊಕ್ಕು ಒಳ್ಳೆಯದಲ್ಲ. ಯಾವಾಗ ಇದರ ಅರಿವು ಆಕೆಗೆ ಆಗುತ್ತದೆ ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು.

ತಿಂಗಳುಗಳೇ ಕಳೆಯಿತು ಆದರೂ ಅಮೃತ ಅಣ್ಣಂದಿರ ಜೊತೆ ಮಾತನಾಡಲೇ ಇಲ್ಲ. ದಿನಗಳು ಕಳೆಯುತ್ತಿದ್ದವು ಆದರೆ ಆಕೆ ಮಾತ್ರ ಬದಲಾಗಲೇ ಇಲ್ಲ.

ಅಮೃತ ಸ್ನೇಹಿತೆ ಒಂದು ವಾರ ತರಗತಿಗೆ ಬರಲೇ ಇರಲಿಲ್ಲ ಆಕೆಗೆ ಏನಾಗಿರಬಹುದು ಎಂದು ತಿಳಿಯಲು ಆಕೆಯ ಮನೆಗೆ ಹೋದಳು, ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳ ಸ್ನೇಹಿತೆಯ ಅಣ್ಣ ತೀರಿ ಹೋಗಿದ್ದಾರೆ ಎಂದು. ತನ್ನ ಅಣ್ಣನನ್ನು ಕಳೆದುಕೊಂಡು ಬೇಸತ್ತು ಹೋಗಿದ್ದಳು ಆಕೆಯ ಸ್ನೇಹಿತೆ. ಕಣ್ಣುಗಳು ಕೆಂಪು ಕೆಂಪಾಗಿ ಹೋಗಿದ್ದವು ಅತ್ತು ಅತ್ತು, ಆಕೆಯನ್ನು ನೋಡುತಿದ್ದರೆ ನಮಗೂ ಕಣ್ಣು ತುಂಬಿ ಬರುವಂತಿತ್ತು. ನೋಡು ಅಮೃತ ನನಗಿದ್ದ ಒಬ್ಬ ಅಣ್ಣನನ್ನು ನಾನು ಕಳೆದುಕೊಂಡಿದ್ದೇನೆ ಆವನಿಗೆ ನಾನು ಎಂದರೆ ಜೀವ ಆದರೆ ಈಗ ಅವನೇ ನನ್ನ ಜೀವನದಿಂದ ದೂರ ಹೋಗಿದ್ದಾನೆ ಅವನಿಲ್ಲದೆ ನನಗೆ ಯಾವುದೂ ಬೇಡವಾಗಿದೆ ಅದಕ್ಕೆ ಕಾಲೇಜ್ ಕಡೆ ಬರಲು ಮನಸ್ಸು ಆಗುತ್ತಿಲ್ಲ, ನಿನಗೆ ನೋಡು ಇಬ್ಬರು ಅಣ್ಣಂದಿರು ಅದೆಷ್ಟು ಪ್ರೀತಿ ಮಾಡುತ್ತಾರೆ ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡ, ನನಗೆ ಗೊತ್ತು ನಿನಗೆ ಅಣ್ಣಂದಿರ ಬಗ್ಗೆ ಚೂರು ಪ್ರೀತಿ ಇಲ್ಲ ಆದರೆ ಅವರ ಪ್ರೀತಿಯ ಮನಸಿಗೆ ಎಂದೂ ನೋವು ಮಾಡಬೇಡ ಎಂದಳು ಅವಳ ಸ್ನೇಹಿತೆ. ಅಮೃತ ಏನೂ ಹೇಳದೆ ಹಾಗೆ ಸುಮ್ಮನೆ ಮನೆಗೆ ನಡೆದಳು. ಆ ದಿನ ರಾತ್ರಿ ಅಮೃತಗೆ ತನ್ನ ಅಣ್ಣ ಆಕಾಶ್ ಗೆ ರಸ್ತೆ ಅಪಘಾತ ಆಗಿ ಅವನು ಸಾಯುವ ಕನಸು ಬಿತ್ತು ಗಾಬರಿಯಿಂದ ಎಚ್ಚರವಾಗಿ ನಂತರ ತನ್ನ ಅಣ್ಣನ ಕೋಣೆಗೆ ಓಡಿ ಹೋಗುತ್ತಾಳೆ. ಅವಳ ಕಣ್ಣುಗಳು ತುಂಬಿ ಹೋಗಿದ್ದವು ತನ್ನ ಸ್ನೇಹಿತೆಗೆ ಆದಂತೆ ಅವಳಿಗೂ ಆಗಿ ಹೋಯಿತೇ ಅನ್ನುವ ಭಯ ಅವಳ ಕಣ್ಣಿನಲ್ಲಿ ಇತ್ತು. ಅಣ್ಣ ಕೋಣೆಯಲ್ಲಿ ಆರಾಮಾಗಿ ಮಲಗಿದ್ದನು ಕಂಡು ಸಮಾಧನಾಗೊಂಡಳು. ಮರುದಿನ ಬೆಳಗ್ಗೆ ತನ್ನ ಅಣ್ಣಂದಿರನ್ನು ಕರೆದು ಕ್ಷಮೆ ಕೇಳಿದಳು ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅತ್ತಳು. ಅಣ್ಣಂದಿರಿಗೆ ಆಶ್ಚರ್ಯ ಧಿಡೀರ್ ಆಗಿ ಹೇಗೆ ಈಕೆಗೆ ಎಲ್ಲಿಲ್ಲದ ಪ್ರೀತಿ ಬಂತು ಎಂದು. ಅವರ ನಂಬಿಕೆಯಂತೆ ಕಾಲವೇ ಅವಳಿಗೆ ಎಲ್ಲದರ ಅರಿವು ಮೂಡಿಸಿತು. ಅಪ್ಪ ಅಮ್ಮನಿಗೂ ತಮ್ಮ ಮಗಳ ಬದಲಾವಣೆಯಿಂದ ಖುಷಿ ಆಗಿತ್ತು. ಅಮೃತ ಪೂರ್ತಿಯಾಗಿ ಬದಲಾಗಿ ತನ್ನ ಅಣ್ಣಂದಿರ ಜೊತೆಗೆ ಖುಷಿಯಾಗಿ ಇದ್ದಳು.


ಇದೊಂದು ನನ್ನ ಕಲ್ಪನೆಯ ಕಥೆ ಅಷ್ಟೇ ಆದರೆ ನಿಜ ಜೀವನದಲ್ಲೂ ಹೀಗೆ ಆಗುತ್ತಾ ಇರುತ್ತದೆ. ಅಣ್ಣ - ತಂಗಿ ಆಗಿರಲಿ ಅಥವಾ ಯಾವುದೇ ಸಂಭಂಧಗಳು ಆಗಿರಲಿ ನಾವು ಅವರ ಜೊತೆ ಅನ್ಯೋನ್ಯವಾಗಿ ಇರಬೇಕು. ಇನ್ನೊಬ್ಬರು ನಮ್ಮ ಮೇಲೆ ತೋರಿಸುವ ಪ್ರೀತಿ, ಕಾಳಜಿಗೆ ಪ್ರತಿಯಾಗಿ ನಾವು ಅವರನ್ನು ಪ್ರೀತಿಯಿಂದ ಕಾಣಬೇಕು ಪ್ರೀತಿ ಇಲ್ಲವಾದರೂ ಅವರ ಭಾವನೆಗೆ ಮನಸ್ಸಿಗೆ ನೋವು ಉಂಟುಮಾಡಬಾರದು. ಕಳೆದುಕೊಂಡ ಮೇಲೆ ಅಥವಾ ದೂರ ಆದ ಮೇಲೆ ಅವರನ್ನು ನೆನೆದು ಆಳುವ ಬದಲು ನಾವು ಕಳೆದುಕೊಳ್ಳುವ ಮೊದಲೇ ಅವರ ಜೊತೆ ಚೆನ್ನಾಗಿ ಖುಷಿಯಾಗಿ ಇರಬೇಕು. 

Wednesday, September 01, 2021

ಮಳೆ ತಂದ ರಗಳೆ

ಮಳೆಯು ಇರಲಿ ಜೊತೆಗೆ ಛತ್ರಿನು ಇರಲಿ


 ನಮಗೆ ಹೇಗೆ ಮೂಡ್ ಸ್ವಿಂಗ್ಸ್ ಇರುತ್ತೋ ಹಾಗೆಯೇ ಪ್ರಕೃತಿಗೆ ಮೂಡ್ ಸ್ವಿಂಗ್ಸ್ ಇರತ್ತೆ ಅಂತ ಅನ್ಸತ್ತೆ. ಅದು ಯಾವಾಗ ಹೇಗೆ ಇರುತ್ತೆ, ಯಾವಾಗ ಬಿಸಿಲು, ಯಾವಾಗ ಮಳೆ, ಚಳಿ ಯಾವಾಗ ಏನ್ ಆಗತ್ತೆ ಅಂತ ಹೇಳೋದಕ್ಕೆ ಆಗಲ್ಲ. ಬೇಸಿಗೆ ಕಾಲದಲ್ಲಿ ಒಂದೊಂದು ಸಲ ಮಳೆ ಬರುತ್ತೆ, ಒಂದೊಂದ್ ಸಲ ಮಳೆಗಾಲದಲ್ಲಿ ಜೋರು ಸೆಕೆ ಇರುತ್ತೆ. ಈ ಮಳೆ ಯಾವಾಗ ಬರುತ್ತೆ ಅಂತ ಹೇಳಕ್ಕೆ ಆಗಲ್ಲ.  ಅದಕ್ಕೆ ಮಳೆಗಾಲ ಶುರು ಆಗುತ್ತಿದ್ದ ಹಾಗೆ ಅಮ್ಮ ದಿನ ಹೇಳೋ ಮಾತು ಒಂದೆ ಮಳೆಯಲ್ಲಿ ಸುಮ್ಮ್ ಸುಮ್ನೆ ನೆನೆಯಬೇಡ ಜ್ವರ ಬರುತ್ತೆ ನೆಗಡಿ ಆಗುತ್ತೆ,ಛತ್ರಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡ ಅಂತ. ಅಮ್ಮ ಏನೋ ಪ್ರೀತಿ ಕಾಳಜಿಯಿಂದ ದಿನ ಹೇಳ್ತಾರೆ ಆದ್ರೆ ನಮ್ಮ ಕಿವಿಗೆ ಇದೆಲ್ಲ ಎಲ್ಲಿ ತಾನೆ ಕೇಳಿಸುತ್ತೆ ನಾವು ನಮ್ಮದೇ ಲೋಕದಲ್ಲಿ ಮುಳುಗಿರುತ್ತೇವೆ. 

ಅಮ್ಮ ಹೇಳಿದ್ದು ಸರೀನೇ ಅದಕ್ಕೆ ನಾನು ಬ್ಯಾಗ್ ನಲ್ಲಿ ಛತ್ರಿ ತಪ್ಪಿಸುತ್ತಾ ಇರಲ್ಲಿಲ್ಲ. ಮಳೆ ಬಂದರೂ ಇಲ್ಲದೇ ಇದ್ದರೂ ಛತ್ರಿ ನನ್ನ ಬ್ಯಾಗ್ ಅಲ್ಲಿಯೇ ಇರುತ್ತಿತ್ತು. 

ಹೀಗೆ ಒಂದು ದಿನ ಕಾಲೇಜಿಗೆ ಹೊರಡುವಾಗ ಅದ್ಯಾವುದೋ ಕಾರಣಕ್ಕೆ ಛತ್ರಿಯನ್ನು ಬ್ಯಾಗಿನಿಂದ ಹೊರಗೆ ತೆಗೆದಿದ್ದೆ ಬಸ್ಸ್ ಮಿಸ್ಸ್ ಆಗುತ್ತೆ ಅಂತ ಆತುರದಲ್ಲಿ ಇದ್ದ ಕಾರಣ ಛತ್ರಿಯ ನೆನಪೇ ಆಗಲಿಲ್ಲ ಅದನ್ನು ಮನೆಯಲ್ಲಿಯೇ ಮರೆತು ಹೋಗಿದ್ದೆ. ಮನೆ ಬಿಟ್ಟು ಸ್ವಲ್ಪ ದೂರ ಹೋಗಿದ್ದೆ ಅಷ್ಟೇ ಟ್ರಿಣ್ ಟ್ರಿಣ್ ಅಂತ ಫೋನ್ ರಿಂಗ್ ಆಯಿತು ಯಾರು ಅಂತ ನೋಡಿದ್ರೆ ಅಮ್ಮ , ಯಾಕಮ್ಮ ಏನ್ ಆಯ್ತು ಬೇಗ ಹೇಳು ನನಗೆ ಲೇಟ್ ಆಗ್ತಾ ಇದೆ ಬಸ್ಸ್ ಮಿಸ್ ಆಗುತ್ತೆ ಅಂತ ಹೇಳಿದೆ. ನೀನು ಛತ್ರಿ ಮರೆತು ಹೋಗಿದ್ದೀಯ ವಾಪಸ್ ಬಂದು ತೆಗೆದುಕೊಂಡು ಹೋಗು ಮಳೆ ಬಂದ್ರೆ ಒದ್ದೆ ಆಗ್ತಿಯ ಅಂದ್ರು. ನನಗೆ ಲೇಟ್ ಬೇರೆ ಆಗಿತ್ತು ಸುತ್ತ ನೋಡಿದ್ರೆ ಬಿಸಿಲು ಇತ್ತು ಮಳೆ ಬರುವ ಯಾವ ಸೂಚನೆಯೂ ಇರಲಿಲ್ಲ, ಅದಕ್ಕೆ ಪರ್ವಾಗಿಲ್ಲ ಅಮ್ಮ ಮಳೆ ಬರಲ್ಲ ನಾನು ಹೋಗ್ತೀನಿ ಲೇಟ್ ಆಗ್ತಿದೆ ಅಂತ ಹೇಳಿ ಹೊರಟು ಹೋದೆ. 

ಆವತ್ತು ಇಡೀ ದಿನ ಬಿರು ಬಿಸಿಲು ಇದ್ದ ಕಾರಣ ನನಗೆ ಸ್ವಲ್ಪ ಸಮಾಧಾನ. ಸಂಜೆ ಮನೆಗೆ ಹೋಗೋ ಸಮಯ ಆಗಿತ್ತು ಆಗಲೂ ಮಳೆ ಬರುವ ಸೂಚನೆ ಇರಲ್ಲಿಲ್ಲ. ನಾನು ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದೆ ಅಷ್ಟರಲ್ಲಿ ಹನಿ ಹನಿ ಮಳೆ ಶುರು ಆಯ್ತು ಛತ್ರಿ ಬೇರೆ ಇರಲಿಲ್ಲ ಆ ಹನಿ ಹನಿ ಮಳೆಗೆ ಒದ್ದೆಯಾಗಿ ಮುಂದೆ ನಡೆದೆ ಮಳೆ ಜೋರಾಗಿಯೇ ಬರಲು ಶುರು ಆಯಿತು ಮನೆ ಸೇರುತ್ತಿದ್ದಂತೆ ನಾನು ಫುಲ್ ಒದ್ದೆ ಆಗಿದ್ದೆ. ಅಮ್ಮನ ಕೈಯಿಂದ ಬೈಗುಳ ಕೇಳಲು ರೆಡಿ ಆಗಿದ್ದೆ, ನೋಡು ನಾನು ಹೇಳಿದ ಮಾತು ಎಲ್ಲಿ ಕೇಳ್ತಿಯಾ ನಾನು ಹೇಳಿದಾಗಲೇ ಬಂದು ಛತ್ರಿ ತೆಗೆದುಕೊಂಡು ಹೋಗಿದ್ದರೆ ಹೀಗೆಲ್ಲ ಒದ್ದೆಯಾಗಿ ಬರಬೇಕಿತ್ತ? ಇವಾಗ ಜ್ವರ ನೆಗಡಿ ಆಗ್ಲಿ ಆಮೇಲೆ ಇದೆ ನಿಂಗೆ ಹಬ್ಬ ಅಂತ ಹೆದರಿಸಿ ಹೋದ್ರು. ಅಮ್ಮ ಹೇಳಿದ ಮಾತು ಸುಳ್ಳಾಗಿದ್ದು ಉಂಟೆ!? ಅಮ್ಮ ಹೇಳಿದಂತೆ ರಾತ್ರಿ ಚಳಿ , ಜ್ವರ , ನೆಗಡಿ ಆಗಿತ್ತು. ಅಮ್ಮನ ಮಾತಿನಿಂದಲೇ ಜ್ವರ ಬಂದ ಹಾಗೆ ಅನಿಸುತಿತ್ತು. ಅದಕ್ಕೆ ದೊಡ್ಡೋರು ಹೇಳೋ ಮಾತು ಕೇಳಬೇಕು ಅಂತ ಹೇಳೋದು ಅನ್ಸತ್ತೆ. 






Friday, July 16, 2021

ಗಿಫ್ಟ್ ಸ್ಟೋರಿ

ಪ್ರಕೃತಿ ಮತ್ತು ಸ್ಪಂದನ ಇಬ್ಬರು ಆತ್ಮೀಯ ಸ್ನೇಹಿತೆಯರು.
ಪ್ರಕೃತಿ ಸ್ವಲ್ಪ ಮುಗ್ಧೆ ಹಾಗೆ ಜಾಣೆ ಕೂಡ ಹೌದು. ಮಾತು ಸ್ವಲ್ಪ ಕಡಿಮೆ ಆದ್ರೆ ಮೌನದಲ್ಲೇ ಮನಸು ಗೆಲ್ಲುವ ಗುಣ ಅವಳದು. ಸ್ಪಂದನ ಈ ಪ್ರಕೃತಿ ಥರ ಅಲ್ಲ. ಸ್ವಲ್ಪ ಪೆದ್ದು ಪೆದ್ದಾಗಿ ಆಡೋದು, ಯಾವಾಗ್ಲೂ ವಟ ವಟ ಅಂತ ಮಾತಾಡೋದು, ತಾಳ್ಮೆ ಅಂತು ಮೊದಲೇ ಕಡಿಮೆ ಈಕೆಗೆ. ಆಮೇಲೆ ಕೋಪ ಮೂಗಿನ ತುದಿ ಮೇಲೇನೆ ಇದೆ.
ಇವರಿಬ್ಬರ ಗುಣಸ್ವಭಾವಗಳಲ್ಲಿ ತುಂಬಾನೇ ವ್ಯತ್ಯಾಸ ಇದ್ರು ಕೂಡ ಇಬ್ಬರು ಒಳ್ಳೆ ಸ್ನೇಹಿತೆಯರು. 
ಸ್ಪಂದನಾಗೆ ತುಂಬಾ ಜನ ಸ್ನೇಹಿತೆಯರು ಇದ್ರು ಆದ್ರೆ ಅವಳಿಗೆ ಪ್ರಕೃತಿ ಅಂದ್ರೆ ಮಾತ್ರ ತುಂಬಾ ಇಷ್ಟ.  ಇಷ್ಟ ಕಷ್ಟ ಏನೇ ಇದ್ರು ಅದನ್ನು ಮೊದಲು ಪ್ರಕೃತಿಗೆ ತಿಳಿಸೋದು. ಸ್ಪಂದನಾಗೆ ಇದ್ದಷ್ಟು ಸ್ನೇಹಿತೆಯರು ಪ್ರಕೃತಿಗೆ  ಇರಲಿಲ್ಲ  ಆದರೆ  ಇದ್ದ ಸ್ನೇಹಿತೆಯರಲ್ಲಿ ಸ್ಪಂದನ ಅಂದ್ರೆ ಆಕೆಗೆ ಇಷ್ಟ.
ಈ ಸ್ಪಂದನಾಳಿಗೆ ಒಂದು ಹುಚ್ಚಿತ್ತು , ತನ್ನೆಲ್ಲಾ ಸ್ನೇಹಿತೆಯರ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡೋದು ಹಾಗೆ ಅವಳ ಹುಟ್ಟುಹಬ್ಬಕ್ಕೆ ಬೇರೆಯವರಿಂದ ಗಿಫ್ಟ್ ಬಯಸೋದು. ಪ್ರಕೃತಿಗೆ ಇದೆಲ್ಲ ಇಷ್ಟ ಇರಲಿಲ್ಲ ಹಾಗಾಗಿ ಅವಳು ಯಾರ ಹುಟ್ಟುಹಬ್ಬಕ್ಕೂ ಗಿಫ್ಟ್ ಕೊಡುತ್ತಾ ಇರಲಿಲ್ಲ ಮತ್ತು ಬೇರೆಯವರಿಂದ ಗಿಫ್ಟ್ ತೆಗೆದುಕೊಳ್ಳುತ್ತಾ ಇರಲಿಲ್ಲ. ಅದೆಷ್ಟೋ ಸಲ ಸ್ಪಂದನ ಪ್ರಕೃತಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಹೋದಾಗ ಆಕೆ ಬೇಡ ನನಗೆ ಇದೆಲ್ಲ ಇಷ್ಟ ಇಲ್ಲ ಎಂದೇ ಹೇಳುತ್ತಿದ್ದಳು.
ಅದೊಂದು ದಿನ ಸ್ಪಂದನ ತನ್ನ ಬೇರೆ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಗಿಫ್ಟ್  ಕೊಡಲೆಂದು ಆಕೆಯ ಮನೆಗೆ ಹೋಗಿದ್ದಳು. ಆಕೆಗೆ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸಿದಳು, ಆಗ ಸ್ಪಂದನಾಳಿಗೆ ಆಕೆ ಒಂದು ಪ್ರಶ್ನೆ ಮಾಡುತ್ತಾಳೆ! ಆದರೆ ಆ ಪ್ರಶ್ನೆಗೆ ಸ್ಪಂದನ ಬಳಿ ಉತ್ತರ ಇರಲಿಲ್ಲ ಅವಳು ಬೇಜಾರು ಮತ್ತು ಕೋಪದಿಂದ ಹಾಗೆ ವಾಪಸ್ ಬರುತ್ತಾಳೆ. ಮರುದಿನ ಕಾಲೇಜಿಗೆ  ಹೋಗುವಾಗ ಒಬ್ಬಳೇ ಹೋಗುತ್ತಾಳೆ  ಪ್ರತಿ ದಿನ ಪ್ರಕೃತಿ ಜೊತೆಗೆ ಹೋಗುತ್ತಿದ್ದ ಆಕೆ ಅಂದು ಒಬ್ಬಳೇ ಹೋಗುತ್ತಾಳೆ. ಸ್ಪಂದನ ಬರುತ್ತಾಳೆ ಎಂದು ಆಕೆಗೆ ಕಾದು ಕಾದು ಪ್ರಕೃತಿ ತಡವಾಗಿ ಕಾಲೇಜಿಗೆ ಬರುತ್ತಾಳೆ. ಸ್ಪಂದನಾಳಿಗೆ ಏನಾಯಿತು ಯಾಕೆ ಬಂದಿಲ್ಲ ಅಂತ ಯೋಚನೆಯಲ್ಲಿಯೇ ಮುಳುಗಿ ಹೋಗಿದ್ದಳು ಹಾಗೆ ಕ್ಲಾಸ್ ಪ್ರವೇಶ ಆಗುತ್ತಿದ್ದ ಹಾಗೆ ನೋಡಿದರೆ ಸ್ಪಂದನ ಕ್ಲಾಸ್ ಅಲ್ಲಿ ಇದ್ದಳು. ಓಡಿ ಹೋಗಿ ಯಾಕೆ ಏನ್ ಆಯ್ತು ಯಾಕೆ ನನ್ನ ಬಿಟ್ಟು ಕಾಲೇಜ್ ಬಂದಿದ್ದೀಯಾ ಅಂತ ಗಾಬರಿಯಿಂದ ಕೇಳಿದಳು ಆದರೆ ಸ್ಪಂದನ ಒಂದು ಮಾತು ಆಡಲಿಲ್ಲ ಮುಖದಲ್ಲಿ ಕೋಪ ಇದ್ದಿದ್ದು ಪ್ರಕೃತಿಗೆ ಅರ್ಥ ಆಯ್ತು. ಯಾವಾಗ್ಲೂ ಮಾತನಡುವ ಸ್ಪಂದನ ಯಾಕೆ ಹಾಗೆ ಮೌನವಾಗಿ ಹೋದಳು ಅಂತ ಪ್ರಕೃತಿಗೆ ಯೋಚನೆ ಆಯಿತು! ಮಾತಾಡು ಎನ್ ಆಗಿದೆ ಯಾಕೆ ಈ ಕೋಪ ಅಂತ  ಕೇಳ್ತಾನೆ ಇದ್ಲು ನಮ್ ಪ್ರಕೃತಿ ಆದ್ರೆ ಸ್ಪಂದನ ಏನೂ ಹೇಳಲಿಲ್ಲ. ಪ್ರಕೃತಿಗೆ ಏನೂ ಅರ್ಥ ಆಗ್ಲಿಲ್ಲ ಅವಳ ಕೋಪ ಮೌನಕ್ಕೆ ಏನು ಕಾರಣ ಇರಬಹುದು ಅಂತ. ಪ್ರಕೃತಿ ಸಂಜೆ ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಸ್ಪಂದನ ಜೊತೆ ಮತ್ತೆ ಮಾತನಾಡಲು ಹೋಗುತ್ತಾಳೆ. ಆಗ ಸ್ಪಂದನ ಹಿಂದಿನ ದಿನ ಆಕೆಯ ಸ್ನೇಹಿತೆ ಹೇಳಿದ ಮಾತುಗಳನ್ನು ಹೇಳುತ್ತಾಳೆ. ಅವಳು ಹೇಳಿದ್ದು ಇಷ್ಟು -" ನೋಡು ನನ್ನ  ಬೆಸ್ಟ್ ಫ್ರೆಂಡ್ ನನಗೆ ಪ್ರತಿ ಸಲ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುತ್ತಾಳೆ ನಾನೂ ಅವಳಿಗೆ ಗಿಫ್ಟ್ ಕೊಡುತ್ತೇನೆ ನಿನ್ನ ಬೆಸ್ಟ್ ಫ್ರೆಂಡ್ ಯಾಕೆ ನಿನಗೆ ಗ್ರಿಫ್ಟ್ ಕೊಡಲ್ಲ  , ಯಾಕೆ ನೀನ್ ಕೊಡೋ ಗಿಫ್ಟ್  ತಗೊಳಲ್ಲ ಅಂತ" ಅವಳು ಹಾಗೆ ಕೇಳಿದ್ದು ನನಗೆ ಇಷ್ಟ ಆಗ್ಲಿಲ್ಲ ಮತ್ತು ನನ್ನ ಬಳಿ ಉತ್ತರವೂ ಇರಲಿಲ್ಲ ಆದರೆ ನನಗೆ ಆ ವಿಷಯದ ಬಗ್ಗೆ ಬೇಸರ ಕೋಪ ಇದೆ. ನೀನು ನನಗೆ ಗಿಫ್ಟ್ ಕೊಡೋದು ಬೇಡ ಆದರೆ ನಾನು ಕೊಡೋ ಗಿಫ್ಟ್ ಬೇಡ ಅನ್ನೋದು ಯಾಕೆ? ಇಷ್ಟ ಇಲ್ಲ ಅಂದ್ರೆ ಏನು ಅರ್ಥ ? ನಾನು ಕೊಡೋ ಗಿಫ್ಟ್ ಬೇಡ ಅಂದ್ರೆ ನಾನ್ ಯಾಕೆ ಬೇಕು ನಿನಗೆ ಅಂತ ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಪ್ರಕೃತಿಗೆ ಆಘಾತನೇ ಆಗೋಯ್ತು ತನ್ನ ಬಗ್ಗೆ ತಿಳಿದ ಸ್ಪಂದನ ಹೀಗೆಲ್ಲ ಹೇಳಿದ್ದು ಆಕೆಗೆ ಸಹಿಸಲು ಆಗಲಿಲ್ಲ  ಕಣ್ಣುಗಳಲ್ಲಿ  ನೀರು ತುಂಬಿ ಹೋಯ್ತು ಆದರೂ ತಾಳ್ಮೆಯಿಂದ ಏನು ಹೇಳದೆ ಆಕೆ ಅಲ್ಲಿಂದ ಹೊರಟು ಹೋದಳು.
ಬರಿ ಒಂದು ಗಿಫ್ಟ್ ವಿಷಯಕ್ಕೆ ತನ್ನ ಮೇಲೆ ಬೇಜಾರು ಮಾಡಿಕೊಂಡಿದ್ದಾಳೆ ಅನ್ನೋ ಬೇಜಾರು ಪ್ರಕೃತಿಗೆ
ತನ್ನ ಬಗ್ಗೆ ಸಮರ್ಥನೆ ಮಾಡಿಕೊಳ್ಳೋ ಪ್ರಯತ್ನ ಆಕೆ ಮಾಡಲಿಲ್ಲ ಅದು ಆಕೆಗೆ ಇಷ್ಟವೂ ಇರಲಿಲ್ಲ ಆಕೆ ಸ್ಪಂದನ ಜೊತೆ ಮಾತನಾಡಲು ಹೋಗಲಿಲ್ಲ, ತನ್ನನ್ನು ಅರ್ಥ ಮಾಡಿಕೊಂಡು  ಅವಳಾಗಿಯೆ  ಮಾತನಾಡಲು ಬರುವವರೆಗೆ  ಕಾಯುತ್ತೇನೆ ಎಂದು ಇದ್ದಳು. ಬೆಸ್ಟ್ ಫ್ರೆಂಡ್ ಆಗಿದ್ರು ತಾನು ಕೊಡೊ ಗಿಫ್ಟ್ ಬೇಡ ಅನ್ನೋದು, ಅದು ಬೇರೆಯವರ ಬಳಿ ಹಾಗೆಲ್ಲ ಮಾತು ಕೇಳೋದು ಸ್ಪಂದನಾಗೆ   ಇಷ್ಟ ಆಗಲಿಲ್ಲ .ನಾನು ಹೇಳಿದ್ದೇ ಸರಿ ಪ್ರಕೃತಿಯೇ ತನ್ನ ಬಳಿ ಬಂದು ಮಾತನಾಡಬೇಕು ಎಂದು ಗಟ್ಟಿ ಮನಸು ಮಾಡಿದ್ದಳು ಸ್ಪಂದನ.  ಇಬ್ಬರ ಹಠ ಜೋರಾಗೇ ಇತ್ತು ಇಬ್ಬರೂ ಸುಮ್ಮನೆ ಇದ್ದರು. ಹೀಗೆ ದಿನಗಳು ಕಳೆದವು  ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡರು. ಪ್ರಕೃತಿಗೆ ಅದೇ ಊರಿನಲ್ಲಿ  ಕೆಲಸ ಸಿಕ್ಕಿತು ,ಸ್ಪಂದನಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿತು. ಸ್ಪಂದನ ಕೆಲಸಕ್ಕಾಗಿ ಬೇರೆ ಊರಿಗೆ ಹೊರಡುವಾಗ ಪ್ರಕೃತಿ ಬಂದು ಮಾತನಾಡುತ್ತಾಳೆ ಎಂದು ಕಾಯುತ್ತಿದ್ದಳು ಆದರೆ ಅವಳು ಬರಲೇ ಇಲ್ಲ.
ಇಬ್ಬರು ತಮ್ಮ ಕೆಲಸದಲ್ಲಿ ತೊಡಗಿದ್ದರು  ಇಬ್ಬರಿಗೂ ತಮ್ಮ ಕಾಲೇಜ್ ದಿನಗಳು ಮತ್ತು ಸ್ಪಂದನಗೆ ಪ್ರಕೃತಿಯ ನೆನಪಾಗುತ್ತಿತ್ತು ಆದರೂ ಕರೆ ಮಾಡಿ ಮಾತನಾಡುವ  ಕೆಲಸ ಮಾಡಲೇ ಇಲ್ಲ.
3 ತಿಂಗಳುಗಳ ಬಳಿಕ ಸ್ಪಂದನ ಮತ್ತೆ ತನ್ನ ಊರಿಗೆ ಹೋಗುತ್ತಾಳೆ. ಮನೆಯಲ್ಲಿ ಅಮ್ಮ ಒಂದು ಪತ್ರ ಆಕೆಗೆ ಕೊಡುತ್ತಾರೆ. ಪ್ರಯಾಣ ಮಾಡಿ ಸುಸ್ತು ಆಗಿದ್ದರಿಂದ ಆಕೆಗೆ ಓದಲು ಮನಸಿರುವುದಿಲ್ಲ ರಾತ್ರಿ ಓದುತ್ತೇನೆ ಎಂದು ಅದನ್ನು ಪಕ್ಕದಲ್ಲಿ ಇಡುತ್ತಾಳೆ. ರಾತ್ರಿ ಊಟ ಮುಗಿಸಿ ಮಲಗಲು ಹೋದಾಗ ಪತ್ರದ ನೆನಪಾಗುತ್ತೆ ಆ ಪತ್ರ ತೆಗೆದು ನೋಡಿದರೆ ಅದು ಪ್ರಕೃತಿ ಬರೆದ ಪತ್ರ. ಪೂರ್ತಿ ಪತ್ರ ಓದಿದ ಆಕೆಯ ಕಣ್ಣುಗಳು ತುಂಬಿ ಹೋಗಿದ್ದವು ಅವಳ ಮೇಲೆ ಅವಳಿಗೇ ಕೋಪ ಬೇಜಾರು ಆಗಿತ್ತು. ಅಷ್ಟಕ್ಕೂ ಆ ಪತ್ರದಲ್ಲಿ ಪ್ರಕೃತಿ ಏನೆಲ್ಲಾ ಬರೆದಿದ್ದಳು ಗೊತ್ತಾ?
" ನನ್ನನ್ನು ಕ್ಷಮಿಸು ಸ್ಪಂದನ, ನನ್ನಿಂದ ನಿನಗೆ ಬೇಸರವಾಗಿದೆ ಆದರೆ ನಿನ್ನ ಮನಸು ನೋಯಿಸೋ ಉದ್ದೇಶ ನನ್ನದಾಗಿರಲ್ಲಿಲ್ಲ . ನಿನಗೆ ಗಿಫ್ಟ್ ಮೇಲೆ ಇರೋ ಹುಚ್ಚು ಒಲವು ನನಗೆ ತಿಳಿದಿತ್ತು ಅದರೆ ಆ ಒಲವು ನಮ್ಮ ಗೆಳೆತನವನ್ನು ದೂರ ಮಾಡುತ್ತೆ ಎಂದು ಅಂದುಕೊಂಡಿರಲಿಲ್ಲ. ನಿನಗೆ ಗಿಫ್ಟ್ ಕೊಡುವುದು ನನಗೆ ಏನು ಕಷ್ಟದ ವಿಷಯ ಆಗಿರಲಿಲ್ಲ. ನನಗೆ ಗಿಫ್ಟ್ ಅಂದರೆ ಅದು ನಿನ್ನ ಗೆಳೆತನ! ಜೀವನ ಪೂರ್ತಿ ನೀನು ನನ್ನ ಸ್ನೇಹಿತೆಯಾಗಿ ಇರಬೇಕು ನಾವು ಜೊತೆಯಲ್ಲಿ ಇಲ್ಲದೇ ಇದ್ದರೂ ನಮ್ಮ ನೆನಪುಗಳು ನಮ್ಮ ಜೊತೆಯಲ್ಲಿ ಇರಬೇಕು ಅದೇ ನನ್ನ ಪಾಲಿಗೆ ಗಿಫ್ಟ್. ಯಾವುದೋ ಒಂದು ವಸ್ತು ಅಥವಾ ಏನೋ ಒಂದು ಗಿಫ್ಟ್ ಅಂತ ಕೊಡೋದು ಚೆನ್ನಾಗಿ ಏನೋ ಇರುತ್ತೆ ಆದರೆ ಎಷ್ಟು ದಿನ ಇರ್ಬೋದು? ಅದೆಷ್ಟೋ ಸಲ ಬರಿ ಗಿಫ್ಟ್  ಅಷ್ಟೇ ನಮ್ಮ ಜೊತೆ ಇರುತ್ತೆ ಆದರೆ ಆ ಗಿಫ್ಟ್ ಕೊಟ್ಟಿರೋ ವ್ಯಕ್ತಿ ಜೊತೆ ನಮ್ಮ ಗೆಳೆತನ ಮುರಿದು ಹೋಗಿರುತ್ತೆ ಆಗ ಯಾವ ಗಿಫ್ಟ್ ಇದ್ರೆ ಏನು ಪ್ರಯೋಜನ? ನನಗೆ ನಿನ್ನಿಂದ ಬೇಕಿರೋ ಗಿಫ್ಟ್ ಅದು ನಿನ್ನ ಗೆಳೆತನ , ನಾನು ನಿನಗೆ ಕೊಡಬೇಕು ಅನ್ನೋ ಗಿಫ್ಟ್ ಕೂಡ ಅದೇ ಗೆಳೆತನ. ಬೆಲೆ ಕಟ್ಟಲಾಗುವ ಗಿಫ್ಟ್ ಬೇಕ ಅಥವಾ ಬೆಲೆ ಕಟ್ಟಲಾಗದ ಗೆಳೆತನ ಅನ್ನೋ ಗಿಫ್ಟ್ ಬೇಕ ಯೋಚನೆ ಮಾಡು. ನಿನಗೆ ಬೇಕಿರೋ ಗಿಫ್ಟ್ ಗೆಳೆತನ ಆಗಿದ್ರೆ ನಾನು ಮತ್ತೆ ನಿನ್ನ ಗೆಳತಿ ಆಗ್ತೀನಿ".
ಇದಿಷ್ಟು ಆ ಪತ್ರದಲ್ಲಿ ಪ್ರಕೃತಿ ಬರೆದಿದ್ದು. ಈ ಪತ್ರ ಓದಿದ ನಂತರ ಸ್ಪಂದನ ಜೋರಾಗಿ ಅತ್ತುಕೊಂಡು ಪ್ರಕೃತಿ ಮನೆಯ ಕಡೆ ಹೋಗುತ್ತಾಳೆ ಆದರೆ ಪ್ರಕೃತಿ ಮನೆಯಲ್ಲಿ ಇರುವುದಿಲ್ಲ ಆಕೆ ಹೊಸ ಕೆಲಸಕ್ಕಾಗಿ  ಬೇರೆ ಊರಿಗೆ ಹೋಗಿರುತ್ತಾಳೆ.  ಆಕೆಯ ಹೊಸ ಫೋನ್ ನಂಬರ್ ತೆಗೆದುಕೊಂಡು ಆಕೆಗೆ ಕರೆ ಮಾಡುತ್ತಾಳೆ. ಇಬ್ಬರೂ ಭಾವುಕರಾಗಿ ಅಳುತ್ತಾರೆ ಪರಸ್ಪರ ಸಮಾಧಾನ ಮಾಡಿಕೊಳ್ಳುತ್ತಾರೆ , ಮತ್ತೆ ಮೊದಲಿನಂತೆ ಗೆಳತಿಯರಾಗುತ್ತರೆ. ಸ್ಪಂದನಾಳಿಗೆ ಇದ್ದ ಗಿಫ್ಟ್ ಹುಚ್ಚು ಕಡಿಮೆ ಆಗುತ್ತೆ ☻

Wednesday, June 23, 2021

ಒಂದು ಸೀಟಿನ ಕಥೆ

 ಒಂದು ಸೀಟಿನ ಕಥೆ


ಆವತ್ತು ಶನಿವಾರ ನಾನು ಮಧ್ಯಾಹ್ನ ಕಾಲೇಜ್ ಮುಗಿಸಿ ಮನೆಗೆ ವಾಪಸ್ ಹೋಗೋ ಸಮಯ. ಸುಡೋ ಬಿಸಿಲು ಒಂದು ಕಡೆಯಾದರೆ ಹೊಟ್ಟೆ ಹಸಿವು ಇನ್ನೊಂದು ಕಡೆಯಾಗಿತ್ತು. ಬೇಗ ಮನೆ ಸೇರಿ ಊಟ ಮಾಡೋ ಅತುರದಲ್ಲಿದ್ದೆ. ಕಾಲೇಜ್ ಇಂದ ಬಸ್ಸ್ ಸ್ಟ್ಯಾಂಡ್ ಕಡೆಗೆ ಓಡಿಕೊಂಡು ಹೋದೆ , ಯಪ್ಪಾ ಒಂದು ಬಸ್ಸ್ ಅಲ್ಲು ಖಾಲಿ ಸೀಟು ಇರಲಿಲ್ಲ ! ಎಲ್ಲಾ ಶಾಲೆ ಕಾಲೇಜ್ ವಿದ್ಯಾರ್ಥಿಗಳು ಮನೆಗೆ ಹೋಗೋ ಸಮಯ ಅಲ್ವಾ ಅದಕ್ಕೆ ಹಾಗೆ. ನಿಂತುಕೊಂಡು ಹೋಗೋ ತಾಳ್ಮೆ ಆಗ್ಲಿ ಶಕ್ತಿ ಆಗ್ಲಿ ನಂಗೆ ಇರ್ಲಿಲ್ಲ ಅದಕ್ಕೆ ಒಂದೆರಡು ಬಸ್ಸ್ ಹಾಗೆ ಬಿಟ್ಟುಬಿಟ್ಟೆ . ಹೊಟ್ಟೇಲಿ ಇರೋ ಹುಳ ಸತ್ತು ಹೋಗಿತ್ತೋ ಏನೋ ಅಷ್ಟು ಜೋರು ಹಸಿವು ಆಗ್ತಾ ಇತ್ತು. ಇನ್ನು ಸೀಟು ಅಂತ ಯೋಚ್ನೆ ಮಾಡಿ ಕುಳಿತ್ರೆ ಮನೆ ಸೇರೋದು ಯಾವಾಗ, ಏನೇ ಆಗ್ಲಿ ಮುಂದೆ ಬರೋ ಬಸ್ಸ್ ಅಲ್ಲಿ ಸೀಟು ಇದ್ರು ಇಲ್ಲ ಅಂದ್ರು ಅದರಲ್ಲೇ ಹೋಗ್ಬೇಕು ಅಂತ ಡಿಸೈಡ್ ಮಾಡಿಬಿಟ್ಟೆ. ಹಾಗೆ ಅಂದುಕೊಳ್ಳುತ್ತ ಇರುವಾಗ ಒಂದು ಬಸ್ಸ್ ಬಂದೇ ಬಿಡ್ತು. ಖಾಲಿ ಸೀಟು ಇರ್ಲಿಲ್ಲ, 5-6 ಜನ ನಿಂತುಕೊಂಡಿದ್ರು ನಾನು ಬಸ್ಸ್ ಹತ್ತಿದೆ. ಆ ಬಿಸಿಲಲ್ಲಿ ಕಾದು ಕಾದು ಫುಲ್ ಸುಸ್ತು ಆಗಿತ್ತು ನಿಲ್ಲೋದಕ್ಕು ಕಷ್ಟ ಆಗ್ತಾ ಇತ್ತು ಆದ್ರೆ ಏನು ಮಾಡೋದು ಹೇಗೋ ನಿಂತುಕೊಂಡೆ. ಬಸ್ಸ್ ಎರಡು ಸ್ಟಾಪ್ ಮುಂದೆ ಹೋಗುತ್ತಿದ್ದಂತೆ ಡ್ರೈವರ್ ಹಿಂದಿನ ಸೀಟಲ್ಲಿ ಕುಳಿತಿದ್ದ ಒಂದು ಹೆಂಗಸು ಬಸ್ಸ್ ನಿಲ್ಲಿಸಿ ಹಾಗೆ ಇಳಿದುಕೊಂಡು ಹೋದ್ರು, ಪಾಪ ಅವರು ಮಿಸ್ಸ್ ಆಗಿ ಈ ಬಸ್ಸ್ ಅಲ್ಲಿ ಬಂದಿದ್ದು. ನಾನು ಅವರ ಸೀಟಲ್ಲಿ ಹೋಗಿ ಕುಳಿತುಕೊಂಡೆ. ದೇವ್ರೆ ನನ್ ಕಷ್ಟ ಅರ್ಥ ಆಗಿ ಒಂದ್ ಸೀಟು ಸಿಗೋ ಹಾಗೆ ಮಾಡಿದೆ ನಿನ್ಗೆ ಥಾಂಕ್ಸ್ ಅಂತ ಮನಸಲ್ಲೇ ಅಂದುಕೊಂಡೆ. ನನ್ನ ಸೀಟಿನ ಹತ್ತಿರ ಒಂದು ಹೆಂಗಸು ನಿಂತುಕೊಂಡಿದ್ರು , ನಿಂತುಕೊಳ್ಳೋದಕ್ಕೆ ತುಂಬಾ ಕಷ್ಟಪಡುತ್ತಿದ್ರು. ನನ್ಗೆ ಅವರನ್ನು ನೋಡಿ ಪಾಪ ಅಂತ ಅನ್ಸ್ತು ನಂಗೆ ಸಿಕ್ಕಿರೋ ಸೀಟನ್ನು ಅವರಿಗೆ ಬಿಟ್ಟುಕೊಡಬೇಕು ಅಂತ ಅನ್ಸ್ತು. ನಾನು ಸೀಟ್ ಇಂದ ಎದ್ದು ಅವರ ಹತ್ರ ಹೇಳ್ದೆ ನೀವು ಇಲ್ಲಿ ಕೂತ್ಕೊಳ್ಳಿ ಅಂತ, ನಾನ್ ಹಾಗೆ ಹೇಳಿದ್ದೆ ತಡ ಈ ಹೆಂಗಸು ನನ್ನ ದಿಟ್ಟಿಸಿ ನೋಡಿ ಹೇಳಿದ್ದು ಏನು ಗೊತ್ತಾ? "ನನ್ಗೆ ಬೇಡ ಸೀಟು ನಾನು ನಿಂತುಕೊಂಡೇ ಹೋಗುತ್ತೇನೆ ನೀನು ಸುಮ್ನೆ ಕೂತ್ಕೋ" ಅಂತಾ ಹೇಳಿಬಿಟ್ರು. ನನ್ಗೆ ಬೇಕಿತ್ತಾ ಇದೆಲ್ಲಾ! ಏನೋ ಕಷ್ಟ ಪಡ್ತಾ ಇದ್ದಾರೆ ಅಂತ ಸೀಟು ಕೊಡಕ್ ಹೋದ್ರೆ ಹೀಗಾ ಹೇಳೋದು? ಬೇಡ ಅಂತ ಇದ್ರು ಹೇಳೋದಕ್ಕೆ ಒಂದು ರೀತಿ ಇಲ್ವಾ? ಸಮಾಧಾನದಿಂದ ಹೇಳಿದ್ರೆ ಆಗ್ತಾ ಇರ್ಲಿಲ್ವಾ? ನಾನೇನೋ ತಪ್ಪಾಗಿ ಹೇಳಿದ ಹಾಗೆ ಅಡ್ಬಿಟ್ರು! ನಾನೇನು ಪ್ರತಿಕ್ರಿಯೆ ನೀಡಲಿಲ್ಲ, ನನ್ಗೇನು ಏನಾದ್ರೂ ಮಾಡ್ಕೊಳ್ಳಿ ಅಂತ ಅಂದುಕೊಂಡು ಸುಮ್ಮನಾಗಿ ಕುಳಿತೆ. ನನಗೆ ಒಂದು ಕ್ಷಣ ಕೋಪ ಬಂತು ಆದ್ರೆ ಏನು ಮಾಡೋದು ಮನಸಲ್ಲಿ ನನ್ಗೆ ನಾನೇ ಬೈದುಕೊಂಡೆ. 

ಈ ಘಟನೆ ಬಳಿಕ ಬಸ್ಸಿನಲ್ಲಿ ಸೀಟು ಕೊಡೋ ಸಾಹಸ ಮಾಡೋದು ಬೇಡವೇ ಬೇಡ ಅಂತ ಅನ್ಸ್ತು ಗೊತ್ತಾ. ಅಲ್ಲ ಅದೆಷ್ಟೋ ಸಲ ಕಂಡಕ್ಟರ್ ವಿದ್ಯಾರ್ಥಿಗಳಿಗೆ ಬೈಯೋದು ನೋಡಿದ್ದೀನಿ ಹಿರಿಯರಿಗೆ, ವಯಸ್ಸಾದವರಿಗೆ ಸೀಟು ಬಿಟ್ಟು ಕೊಡಿ ಹಾಗೆ ಹೀಗೆ ಅಂತ. ನಾವಾಗಿಯೇ ಸೀಟು ಬಿಟ್ಟುಕೊಟ್ಟಾಗ ಹೀಗೆಲ್ಲ ಆದ್ರೆ ಹೇಗೆ ಅನ್ಸುತ್ತೆ ಹೇಳಿ? 
ಎಲ್ಲರೂ ಹೀಗೆ ಇರ್ತಾರೆ ಅಂತ ನನ್ ಹೇಳ್ತಿಲ್ಲ ಆದ್ರೆ ಹೀಗೂ ಕೆಲವರು ಇದ್ದಾರೆ ಅಂತ ನಾನು ಹೇಳೋದು. ಇದು ನಾನು ಬರಿ ಮಾತಿಗೆ ಹೇಳಿದ ಕಥೆ ಅಲ್ಲ, 5 ವರ್ಷಗಳ ಹಿಂದೆ ನಾನು ಪಿಯುಸಿ ಓದುತ್ತಿರುವಾಗ ನಡೆದ ಘಟನೆ. ಈಗಲೂ ಬಸ್ಸಿನಲ್ಲಿ ಹೋಗುವಾಗ ಸೀಟು ಕೊಡೋ ಸಂದರ್ಭ ಬಂದಾಗ ಈ ಘಟನೆ ನನ್ನ ನೆನಪಿಗೆ ಬರುತ್ತೆ.
ನಿಮಗೂ ಬಸ್ಸಿನಲ್ಲಿ ಈ ತರ ಯಾವತ್ತಾದರೂ ಆಗಿರೋದು ಇದ್ಯಾ?!