Friday, July 16, 2021

ಗಿಫ್ಟ್ ಸ್ಟೋರಿ

ಪ್ರಕೃತಿ ಮತ್ತು ಸ್ಪಂದನ ಇಬ್ಬರು ಆತ್ಮೀಯ ಸ್ನೇಹಿತೆಯರು.
ಪ್ರಕೃತಿ ಸ್ವಲ್ಪ ಮುಗ್ಧೆ ಹಾಗೆ ಜಾಣೆ ಕೂಡ ಹೌದು. ಮಾತು ಸ್ವಲ್ಪ ಕಡಿಮೆ ಆದ್ರೆ ಮೌನದಲ್ಲೇ ಮನಸು ಗೆಲ್ಲುವ ಗುಣ ಅವಳದು. ಸ್ಪಂದನ ಈ ಪ್ರಕೃತಿ ಥರ ಅಲ್ಲ. ಸ್ವಲ್ಪ ಪೆದ್ದು ಪೆದ್ದಾಗಿ ಆಡೋದು, ಯಾವಾಗ್ಲೂ ವಟ ವಟ ಅಂತ ಮಾತಾಡೋದು, ತಾಳ್ಮೆ ಅಂತು ಮೊದಲೇ ಕಡಿಮೆ ಈಕೆಗೆ. ಆಮೇಲೆ ಕೋಪ ಮೂಗಿನ ತುದಿ ಮೇಲೇನೆ ಇದೆ.
ಇವರಿಬ್ಬರ ಗುಣಸ್ವಭಾವಗಳಲ್ಲಿ ತುಂಬಾನೇ ವ್ಯತ್ಯಾಸ ಇದ್ರು ಕೂಡ ಇಬ್ಬರು ಒಳ್ಳೆ ಸ್ನೇಹಿತೆಯರು. 
ಸ್ಪಂದನಾಗೆ ತುಂಬಾ ಜನ ಸ್ನೇಹಿತೆಯರು ಇದ್ರು ಆದ್ರೆ ಅವಳಿಗೆ ಪ್ರಕೃತಿ ಅಂದ್ರೆ ಮಾತ್ರ ತುಂಬಾ ಇಷ್ಟ.  ಇಷ್ಟ ಕಷ್ಟ ಏನೇ ಇದ್ರು ಅದನ್ನು ಮೊದಲು ಪ್ರಕೃತಿಗೆ ತಿಳಿಸೋದು. ಸ್ಪಂದನಾಗೆ ಇದ್ದಷ್ಟು ಸ್ನೇಹಿತೆಯರು ಪ್ರಕೃತಿಗೆ  ಇರಲಿಲ್ಲ  ಆದರೆ  ಇದ್ದ ಸ್ನೇಹಿತೆಯರಲ್ಲಿ ಸ್ಪಂದನ ಅಂದ್ರೆ ಆಕೆಗೆ ಇಷ್ಟ.
ಈ ಸ್ಪಂದನಾಳಿಗೆ ಒಂದು ಹುಚ್ಚಿತ್ತು , ತನ್ನೆಲ್ಲಾ ಸ್ನೇಹಿತೆಯರ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡೋದು ಹಾಗೆ ಅವಳ ಹುಟ್ಟುಹಬ್ಬಕ್ಕೆ ಬೇರೆಯವರಿಂದ ಗಿಫ್ಟ್ ಬಯಸೋದು. ಪ್ರಕೃತಿಗೆ ಇದೆಲ್ಲ ಇಷ್ಟ ಇರಲಿಲ್ಲ ಹಾಗಾಗಿ ಅವಳು ಯಾರ ಹುಟ್ಟುಹಬ್ಬಕ್ಕೂ ಗಿಫ್ಟ್ ಕೊಡುತ್ತಾ ಇರಲಿಲ್ಲ ಮತ್ತು ಬೇರೆಯವರಿಂದ ಗಿಫ್ಟ್ ತೆಗೆದುಕೊಳ್ಳುತ್ತಾ ಇರಲಿಲ್ಲ. ಅದೆಷ್ಟೋ ಸಲ ಸ್ಪಂದನ ಪ್ರಕೃತಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಹೋದಾಗ ಆಕೆ ಬೇಡ ನನಗೆ ಇದೆಲ್ಲ ಇಷ್ಟ ಇಲ್ಲ ಎಂದೇ ಹೇಳುತ್ತಿದ್ದಳು.
ಅದೊಂದು ದಿನ ಸ್ಪಂದನ ತನ್ನ ಬೇರೆ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಗಿಫ್ಟ್  ಕೊಡಲೆಂದು ಆಕೆಯ ಮನೆಗೆ ಹೋಗಿದ್ದಳು. ಆಕೆಗೆ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸಿದಳು, ಆಗ ಸ್ಪಂದನಾಳಿಗೆ ಆಕೆ ಒಂದು ಪ್ರಶ್ನೆ ಮಾಡುತ್ತಾಳೆ! ಆದರೆ ಆ ಪ್ರಶ್ನೆಗೆ ಸ್ಪಂದನ ಬಳಿ ಉತ್ತರ ಇರಲಿಲ್ಲ ಅವಳು ಬೇಜಾರು ಮತ್ತು ಕೋಪದಿಂದ ಹಾಗೆ ವಾಪಸ್ ಬರುತ್ತಾಳೆ. ಮರುದಿನ ಕಾಲೇಜಿಗೆ  ಹೋಗುವಾಗ ಒಬ್ಬಳೇ ಹೋಗುತ್ತಾಳೆ  ಪ್ರತಿ ದಿನ ಪ್ರಕೃತಿ ಜೊತೆಗೆ ಹೋಗುತ್ತಿದ್ದ ಆಕೆ ಅಂದು ಒಬ್ಬಳೇ ಹೋಗುತ್ತಾಳೆ. ಸ್ಪಂದನ ಬರುತ್ತಾಳೆ ಎಂದು ಆಕೆಗೆ ಕಾದು ಕಾದು ಪ್ರಕೃತಿ ತಡವಾಗಿ ಕಾಲೇಜಿಗೆ ಬರುತ್ತಾಳೆ. ಸ್ಪಂದನಾಳಿಗೆ ಏನಾಯಿತು ಯಾಕೆ ಬಂದಿಲ್ಲ ಅಂತ ಯೋಚನೆಯಲ್ಲಿಯೇ ಮುಳುಗಿ ಹೋಗಿದ್ದಳು ಹಾಗೆ ಕ್ಲಾಸ್ ಪ್ರವೇಶ ಆಗುತ್ತಿದ್ದ ಹಾಗೆ ನೋಡಿದರೆ ಸ್ಪಂದನ ಕ್ಲಾಸ್ ಅಲ್ಲಿ ಇದ್ದಳು. ಓಡಿ ಹೋಗಿ ಯಾಕೆ ಏನ್ ಆಯ್ತು ಯಾಕೆ ನನ್ನ ಬಿಟ್ಟು ಕಾಲೇಜ್ ಬಂದಿದ್ದೀಯಾ ಅಂತ ಗಾಬರಿಯಿಂದ ಕೇಳಿದಳು ಆದರೆ ಸ್ಪಂದನ ಒಂದು ಮಾತು ಆಡಲಿಲ್ಲ ಮುಖದಲ್ಲಿ ಕೋಪ ಇದ್ದಿದ್ದು ಪ್ರಕೃತಿಗೆ ಅರ್ಥ ಆಯ್ತು. ಯಾವಾಗ್ಲೂ ಮಾತನಡುವ ಸ್ಪಂದನ ಯಾಕೆ ಹಾಗೆ ಮೌನವಾಗಿ ಹೋದಳು ಅಂತ ಪ್ರಕೃತಿಗೆ ಯೋಚನೆ ಆಯಿತು! ಮಾತಾಡು ಎನ್ ಆಗಿದೆ ಯಾಕೆ ಈ ಕೋಪ ಅಂತ  ಕೇಳ್ತಾನೆ ಇದ್ಲು ನಮ್ ಪ್ರಕೃತಿ ಆದ್ರೆ ಸ್ಪಂದನ ಏನೂ ಹೇಳಲಿಲ್ಲ. ಪ್ರಕೃತಿಗೆ ಏನೂ ಅರ್ಥ ಆಗ್ಲಿಲ್ಲ ಅವಳ ಕೋಪ ಮೌನಕ್ಕೆ ಏನು ಕಾರಣ ಇರಬಹುದು ಅಂತ. ಪ್ರಕೃತಿ ಸಂಜೆ ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಸ್ಪಂದನ ಜೊತೆ ಮತ್ತೆ ಮಾತನಾಡಲು ಹೋಗುತ್ತಾಳೆ. ಆಗ ಸ್ಪಂದನ ಹಿಂದಿನ ದಿನ ಆಕೆಯ ಸ್ನೇಹಿತೆ ಹೇಳಿದ ಮಾತುಗಳನ್ನು ಹೇಳುತ್ತಾಳೆ. ಅವಳು ಹೇಳಿದ್ದು ಇಷ್ಟು -" ನೋಡು ನನ್ನ  ಬೆಸ್ಟ್ ಫ್ರೆಂಡ್ ನನಗೆ ಪ್ರತಿ ಸಲ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುತ್ತಾಳೆ ನಾನೂ ಅವಳಿಗೆ ಗಿಫ್ಟ್ ಕೊಡುತ್ತೇನೆ ನಿನ್ನ ಬೆಸ್ಟ್ ಫ್ರೆಂಡ್ ಯಾಕೆ ನಿನಗೆ ಗ್ರಿಫ್ಟ್ ಕೊಡಲ್ಲ  , ಯಾಕೆ ನೀನ್ ಕೊಡೋ ಗಿಫ್ಟ್  ತಗೊಳಲ್ಲ ಅಂತ" ಅವಳು ಹಾಗೆ ಕೇಳಿದ್ದು ನನಗೆ ಇಷ್ಟ ಆಗ್ಲಿಲ್ಲ ಮತ್ತು ನನ್ನ ಬಳಿ ಉತ್ತರವೂ ಇರಲಿಲ್ಲ ಆದರೆ ನನಗೆ ಆ ವಿಷಯದ ಬಗ್ಗೆ ಬೇಸರ ಕೋಪ ಇದೆ. ನೀನು ನನಗೆ ಗಿಫ್ಟ್ ಕೊಡೋದು ಬೇಡ ಆದರೆ ನಾನು ಕೊಡೋ ಗಿಫ್ಟ್ ಬೇಡ ಅನ್ನೋದು ಯಾಕೆ? ಇಷ್ಟ ಇಲ್ಲ ಅಂದ್ರೆ ಏನು ಅರ್ಥ ? ನಾನು ಕೊಡೋ ಗಿಫ್ಟ್ ಬೇಡ ಅಂದ್ರೆ ನಾನ್ ಯಾಕೆ ಬೇಕು ನಿನಗೆ ಅಂತ ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಪ್ರಕೃತಿಗೆ ಆಘಾತನೇ ಆಗೋಯ್ತು ತನ್ನ ಬಗ್ಗೆ ತಿಳಿದ ಸ್ಪಂದನ ಹೀಗೆಲ್ಲ ಹೇಳಿದ್ದು ಆಕೆಗೆ ಸಹಿಸಲು ಆಗಲಿಲ್ಲ  ಕಣ್ಣುಗಳಲ್ಲಿ  ನೀರು ತುಂಬಿ ಹೋಯ್ತು ಆದರೂ ತಾಳ್ಮೆಯಿಂದ ಏನು ಹೇಳದೆ ಆಕೆ ಅಲ್ಲಿಂದ ಹೊರಟು ಹೋದಳು.
ಬರಿ ಒಂದು ಗಿಫ್ಟ್ ವಿಷಯಕ್ಕೆ ತನ್ನ ಮೇಲೆ ಬೇಜಾರು ಮಾಡಿಕೊಂಡಿದ್ದಾಳೆ ಅನ್ನೋ ಬೇಜಾರು ಪ್ರಕೃತಿಗೆ
ತನ್ನ ಬಗ್ಗೆ ಸಮರ್ಥನೆ ಮಾಡಿಕೊಳ್ಳೋ ಪ್ರಯತ್ನ ಆಕೆ ಮಾಡಲಿಲ್ಲ ಅದು ಆಕೆಗೆ ಇಷ್ಟವೂ ಇರಲಿಲ್ಲ ಆಕೆ ಸ್ಪಂದನ ಜೊತೆ ಮಾತನಾಡಲು ಹೋಗಲಿಲ್ಲ, ತನ್ನನ್ನು ಅರ್ಥ ಮಾಡಿಕೊಂಡು  ಅವಳಾಗಿಯೆ  ಮಾತನಾಡಲು ಬರುವವರೆಗೆ  ಕಾಯುತ್ತೇನೆ ಎಂದು ಇದ್ದಳು. ಬೆಸ್ಟ್ ಫ್ರೆಂಡ್ ಆಗಿದ್ರು ತಾನು ಕೊಡೊ ಗಿಫ್ಟ್ ಬೇಡ ಅನ್ನೋದು, ಅದು ಬೇರೆಯವರ ಬಳಿ ಹಾಗೆಲ್ಲ ಮಾತು ಕೇಳೋದು ಸ್ಪಂದನಾಗೆ   ಇಷ್ಟ ಆಗಲಿಲ್ಲ .ನಾನು ಹೇಳಿದ್ದೇ ಸರಿ ಪ್ರಕೃತಿಯೇ ತನ್ನ ಬಳಿ ಬಂದು ಮಾತನಾಡಬೇಕು ಎಂದು ಗಟ್ಟಿ ಮನಸು ಮಾಡಿದ್ದಳು ಸ್ಪಂದನ.  ಇಬ್ಬರ ಹಠ ಜೋರಾಗೇ ಇತ್ತು ಇಬ್ಬರೂ ಸುಮ್ಮನೆ ಇದ್ದರು. ಹೀಗೆ ದಿನಗಳು ಕಳೆದವು  ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡರು. ಪ್ರಕೃತಿಗೆ ಅದೇ ಊರಿನಲ್ಲಿ  ಕೆಲಸ ಸಿಕ್ಕಿತು ,ಸ್ಪಂದನಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿತು. ಸ್ಪಂದನ ಕೆಲಸಕ್ಕಾಗಿ ಬೇರೆ ಊರಿಗೆ ಹೊರಡುವಾಗ ಪ್ರಕೃತಿ ಬಂದು ಮಾತನಾಡುತ್ತಾಳೆ ಎಂದು ಕಾಯುತ್ತಿದ್ದಳು ಆದರೆ ಅವಳು ಬರಲೇ ಇಲ್ಲ.
ಇಬ್ಬರು ತಮ್ಮ ಕೆಲಸದಲ್ಲಿ ತೊಡಗಿದ್ದರು  ಇಬ್ಬರಿಗೂ ತಮ್ಮ ಕಾಲೇಜ್ ದಿನಗಳು ಮತ್ತು ಸ್ಪಂದನಗೆ ಪ್ರಕೃತಿಯ ನೆನಪಾಗುತ್ತಿತ್ತು ಆದರೂ ಕರೆ ಮಾಡಿ ಮಾತನಾಡುವ  ಕೆಲಸ ಮಾಡಲೇ ಇಲ್ಲ.
3 ತಿಂಗಳುಗಳ ಬಳಿಕ ಸ್ಪಂದನ ಮತ್ತೆ ತನ್ನ ಊರಿಗೆ ಹೋಗುತ್ತಾಳೆ. ಮನೆಯಲ್ಲಿ ಅಮ್ಮ ಒಂದು ಪತ್ರ ಆಕೆಗೆ ಕೊಡುತ್ತಾರೆ. ಪ್ರಯಾಣ ಮಾಡಿ ಸುಸ್ತು ಆಗಿದ್ದರಿಂದ ಆಕೆಗೆ ಓದಲು ಮನಸಿರುವುದಿಲ್ಲ ರಾತ್ರಿ ಓದುತ್ತೇನೆ ಎಂದು ಅದನ್ನು ಪಕ್ಕದಲ್ಲಿ ಇಡುತ್ತಾಳೆ. ರಾತ್ರಿ ಊಟ ಮುಗಿಸಿ ಮಲಗಲು ಹೋದಾಗ ಪತ್ರದ ನೆನಪಾಗುತ್ತೆ ಆ ಪತ್ರ ತೆಗೆದು ನೋಡಿದರೆ ಅದು ಪ್ರಕೃತಿ ಬರೆದ ಪತ್ರ. ಪೂರ್ತಿ ಪತ್ರ ಓದಿದ ಆಕೆಯ ಕಣ್ಣುಗಳು ತುಂಬಿ ಹೋಗಿದ್ದವು ಅವಳ ಮೇಲೆ ಅವಳಿಗೇ ಕೋಪ ಬೇಜಾರು ಆಗಿತ್ತು. ಅಷ್ಟಕ್ಕೂ ಆ ಪತ್ರದಲ್ಲಿ ಪ್ರಕೃತಿ ಏನೆಲ್ಲಾ ಬರೆದಿದ್ದಳು ಗೊತ್ತಾ?
" ನನ್ನನ್ನು ಕ್ಷಮಿಸು ಸ್ಪಂದನ, ನನ್ನಿಂದ ನಿನಗೆ ಬೇಸರವಾಗಿದೆ ಆದರೆ ನಿನ್ನ ಮನಸು ನೋಯಿಸೋ ಉದ್ದೇಶ ನನ್ನದಾಗಿರಲ್ಲಿಲ್ಲ . ನಿನಗೆ ಗಿಫ್ಟ್ ಮೇಲೆ ಇರೋ ಹುಚ್ಚು ಒಲವು ನನಗೆ ತಿಳಿದಿತ್ತು ಅದರೆ ಆ ಒಲವು ನಮ್ಮ ಗೆಳೆತನವನ್ನು ದೂರ ಮಾಡುತ್ತೆ ಎಂದು ಅಂದುಕೊಂಡಿರಲಿಲ್ಲ. ನಿನಗೆ ಗಿಫ್ಟ್ ಕೊಡುವುದು ನನಗೆ ಏನು ಕಷ್ಟದ ವಿಷಯ ಆಗಿರಲಿಲ್ಲ. ನನಗೆ ಗಿಫ್ಟ್ ಅಂದರೆ ಅದು ನಿನ್ನ ಗೆಳೆತನ! ಜೀವನ ಪೂರ್ತಿ ನೀನು ನನ್ನ ಸ್ನೇಹಿತೆಯಾಗಿ ಇರಬೇಕು ನಾವು ಜೊತೆಯಲ್ಲಿ ಇಲ್ಲದೇ ಇದ್ದರೂ ನಮ್ಮ ನೆನಪುಗಳು ನಮ್ಮ ಜೊತೆಯಲ್ಲಿ ಇರಬೇಕು ಅದೇ ನನ್ನ ಪಾಲಿಗೆ ಗಿಫ್ಟ್. ಯಾವುದೋ ಒಂದು ವಸ್ತು ಅಥವಾ ಏನೋ ಒಂದು ಗಿಫ್ಟ್ ಅಂತ ಕೊಡೋದು ಚೆನ್ನಾಗಿ ಏನೋ ಇರುತ್ತೆ ಆದರೆ ಎಷ್ಟು ದಿನ ಇರ್ಬೋದು? ಅದೆಷ್ಟೋ ಸಲ ಬರಿ ಗಿಫ್ಟ್  ಅಷ್ಟೇ ನಮ್ಮ ಜೊತೆ ಇರುತ್ತೆ ಆದರೆ ಆ ಗಿಫ್ಟ್ ಕೊಟ್ಟಿರೋ ವ್ಯಕ್ತಿ ಜೊತೆ ನಮ್ಮ ಗೆಳೆತನ ಮುರಿದು ಹೋಗಿರುತ್ತೆ ಆಗ ಯಾವ ಗಿಫ್ಟ್ ಇದ್ರೆ ಏನು ಪ್ರಯೋಜನ? ನನಗೆ ನಿನ್ನಿಂದ ಬೇಕಿರೋ ಗಿಫ್ಟ್ ಅದು ನಿನ್ನ ಗೆಳೆತನ , ನಾನು ನಿನಗೆ ಕೊಡಬೇಕು ಅನ್ನೋ ಗಿಫ್ಟ್ ಕೂಡ ಅದೇ ಗೆಳೆತನ. ಬೆಲೆ ಕಟ್ಟಲಾಗುವ ಗಿಫ್ಟ್ ಬೇಕ ಅಥವಾ ಬೆಲೆ ಕಟ್ಟಲಾಗದ ಗೆಳೆತನ ಅನ್ನೋ ಗಿಫ್ಟ್ ಬೇಕ ಯೋಚನೆ ಮಾಡು. ನಿನಗೆ ಬೇಕಿರೋ ಗಿಫ್ಟ್ ಗೆಳೆತನ ಆಗಿದ್ರೆ ನಾನು ಮತ್ತೆ ನಿನ್ನ ಗೆಳತಿ ಆಗ್ತೀನಿ".
ಇದಿಷ್ಟು ಆ ಪತ್ರದಲ್ಲಿ ಪ್ರಕೃತಿ ಬರೆದಿದ್ದು. ಈ ಪತ್ರ ಓದಿದ ನಂತರ ಸ್ಪಂದನ ಜೋರಾಗಿ ಅತ್ತುಕೊಂಡು ಪ್ರಕೃತಿ ಮನೆಯ ಕಡೆ ಹೋಗುತ್ತಾಳೆ ಆದರೆ ಪ್ರಕೃತಿ ಮನೆಯಲ್ಲಿ ಇರುವುದಿಲ್ಲ ಆಕೆ ಹೊಸ ಕೆಲಸಕ್ಕಾಗಿ  ಬೇರೆ ಊರಿಗೆ ಹೋಗಿರುತ್ತಾಳೆ.  ಆಕೆಯ ಹೊಸ ಫೋನ್ ನಂಬರ್ ತೆಗೆದುಕೊಂಡು ಆಕೆಗೆ ಕರೆ ಮಾಡುತ್ತಾಳೆ. ಇಬ್ಬರೂ ಭಾವುಕರಾಗಿ ಅಳುತ್ತಾರೆ ಪರಸ್ಪರ ಸಮಾಧಾನ ಮಾಡಿಕೊಳ್ಳುತ್ತಾರೆ , ಮತ್ತೆ ಮೊದಲಿನಂತೆ ಗೆಳತಿಯರಾಗುತ್ತರೆ. ಸ್ಪಂದನಾಳಿಗೆ ಇದ್ದ ಗಿಫ್ಟ್ ಹುಚ್ಚು ಕಡಿಮೆ ಆಗುತ್ತೆ ☻

3 comments: