Wednesday, June 23, 2021

ಒಂದು ಸೀಟಿನ ಕಥೆ

 ಒಂದು ಸೀಟಿನ ಕಥೆ


ಆವತ್ತು ಶನಿವಾರ ನಾನು ಮಧ್ಯಾಹ್ನ ಕಾಲೇಜ್ ಮುಗಿಸಿ ಮನೆಗೆ ವಾಪಸ್ ಹೋಗೋ ಸಮಯ. ಸುಡೋ ಬಿಸಿಲು ಒಂದು ಕಡೆಯಾದರೆ ಹೊಟ್ಟೆ ಹಸಿವು ಇನ್ನೊಂದು ಕಡೆಯಾಗಿತ್ತು. ಬೇಗ ಮನೆ ಸೇರಿ ಊಟ ಮಾಡೋ ಅತುರದಲ್ಲಿದ್ದೆ. ಕಾಲೇಜ್ ಇಂದ ಬಸ್ಸ್ ಸ್ಟ್ಯಾಂಡ್ ಕಡೆಗೆ ಓಡಿಕೊಂಡು ಹೋದೆ , ಯಪ್ಪಾ ಒಂದು ಬಸ್ಸ್ ಅಲ್ಲು ಖಾಲಿ ಸೀಟು ಇರಲಿಲ್ಲ ! ಎಲ್ಲಾ ಶಾಲೆ ಕಾಲೇಜ್ ವಿದ್ಯಾರ್ಥಿಗಳು ಮನೆಗೆ ಹೋಗೋ ಸಮಯ ಅಲ್ವಾ ಅದಕ್ಕೆ ಹಾಗೆ. ನಿಂತುಕೊಂಡು ಹೋಗೋ ತಾಳ್ಮೆ ಆಗ್ಲಿ ಶಕ್ತಿ ಆಗ್ಲಿ ನಂಗೆ ಇರ್ಲಿಲ್ಲ ಅದಕ್ಕೆ ಒಂದೆರಡು ಬಸ್ಸ್ ಹಾಗೆ ಬಿಟ್ಟುಬಿಟ್ಟೆ . ಹೊಟ್ಟೇಲಿ ಇರೋ ಹುಳ ಸತ್ತು ಹೋಗಿತ್ತೋ ಏನೋ ಅಷ್ಟು ಜೋರು ಹಸಿವು ಆಗ್ತಾ ಇತ್ತು. ಇನ್ನು ಸೀಟು ಅಂತ ಯೋಚ್ನೆ ಮಾಡಿ ಕುಳಿತ್ರೆ ಮನೆ ಸೇರೋದು ಯಾವಾಗ, ಏನೇ ಆಗ್ಲಿ ಮುಂದೆ ಬರೋ ಬಸ್ಸ್ ಅಲ್ಲಿ ಸೀಟು ಇದ್ರು ಇಲ್ಲ ಅಂದ್ರು ಅದರಲ್ಲೇ ಹೋಗ್ಬೇಕು ಅಂತ ಡಿಸೈಡ್ ಮಾಡಿಬಿಟ್ಟೆ. ಹಾಗೆ ಅಂದುಕೊಳ್ಳುತ್ತ ಇರುವಾಗ ಒಂದು ಬಸ್ಸ್ ಬಂದೇ ಬಿಡ್ತು. ಖಾಲಿ ಸೀಟು ಇರ್ಲಿಲ್ಲ, 5-6 ಜನ ನಿಂತುಕೊಂಡಿದ್ರು ನಾನು ಬಸ್ಸ್ ಹತ್ತಿದೆ. ಆ ಬಿಸಿಲಲ್ಲಿ ಕಾದು ಕಾದು ಫುಲ್ ಸುಸ್ತು ಆಗಿತ್ತು ನಿಲ್ಲೋದಕ್ಕು ಕಷ್ಟ ಆಗ್ತಾ ಇತ್ತು ಆದ್ರೆ ಏನು ಮಾಡೋದು ಹೇಗೋ ನಿಂತುಕೊಂಡೆ. ಬಸ್ಸ್ ಎರಡು ಸ್ಟಾಪ್ ಮುಂದೆ ಹೋಗುತ್ತಿದ್ದಂತೆ ಡ್ರೈವರ್ ಹಿಂದಿನ ಸೀಟಲ್ಲಿ ಕುಳಿತಿದ್ದ ಒಂದು ಹೆಂಗಸು ಬಸ್ಸ್ ನಿಲ್ಲಿಸಿ ಹಾಗೆ ಇಳಿದುಕೊಂಡು ಹೋದ್ರು, ಪಾಪ ಅವರು ಮಿಸ್ಸ್ ಆಗಿ ಈ ಬಸ್ಸ್ ಅಲ್ಲಿ ಬಂದಿದ್ದು. ನಾನು ಅವರ ಸೀಟಲ್ಲಿ ಹೋಗಿ ಕುಳಿತುಕೊಂಡೆ. ದೇವ್ರೆ ನನ್ ಕಷ್ಟ ಅರ್ಥ ಆಗಿ ಒಂದ್ ಸೀಟು ಸಿಗೋ ಹಾಗೆ ಮಾಡಿದೆ ನಿನ್ಗೆ ಥಾಂಕ್ಸ್ ಅಂತ ಮನಸಲ್ಲೇ ಅಂದುಕೊಂಡೆ. ನನ್ನ ಸೀಟಿನ ಹತ್ತಿರ ಒಂದು ಹೆಂಗಸು ನಿಂತುಕೊಂಡಿದ್ರು , ನಿಂತುಕೊಳ್ಳೋದಕ್ಕೆ ತುಂಬಾ ಕಷ್ಟಪಡುತ್ತಿದ್ರು. ನನ್ಗೆ ಅವರನ್ನು ನೋಡಿ ಪಾಪ ಅಂತ ಅನ್ಸ್ತು ನಂಗೆ ಸಿಕ್ಕಿರೋ ಸೀಟನ್ನು ಅವರಿಗೆ ಬಿಟ್ಟುಕೊಡಬೇಕು ಅಂತ ಅನ್ಸ್ತು. ನಾನು ಸೀಟ್ ಇಂದ ಎದ್ದು ಅವರ ಹತ್ರ ಹೇಳ್ದೆ ನೀವು ಇಲ್ಲಿ ಕೂತ್ಕೊಳ್ಳಿ ಅಂತ, ನಾನ್ ಹಾಗೆ ಹೇಳಿದ್ದೆ ತಡ ಈ ಹೆಂಗಸು ನನ್ನ ದಿಟ್ಟಿಸಿ ನೋಡಿ ಹೇಳಿದ್ದು ಏನು ಗೊತ್ತಾ? "ನನ್ಗೆ ಬೇಡ ಸೀಟು ನಾನು ನಿಂತುಕೊಂಡೇ ಹೋಗುತ್ತೇನೆ ನೀನು ಸುಮ್ನೆ ಕೂತ್ಕೋ" ಅಂತಾ ಹೇಳಿಬಿಟ್ರು. ನನ್ಗೆ ಬೇಕಿತ್ತಾ ಇದೆಲ್ಲಾ! ಏನೋ ಕಷ್ಟ ಪಡ್ತಾ ಇದ್ದಾರೆ ಅಂತ ಸೀಟು ಕೊಡಕ್ ಹೋದ್ರೆ ಹೀಗಾ ಹೇಳೋದು? ಬೇಡ ಅಂತ ಇದ್ರು ಹೇಳೋದಕ್ಕೆ ಒಂದು ರೀತಿ ಇಲ್ವಾ? ಸಮಾಧಾನದಿಂದ ಹೇಳಿದ್ರೆ ಆಗ್ತಾ ಇರ್ಲಿಲ್ವಾ? ನಾನೇನೋ ತಪ್ಪಾಗಿ ಹೇಳಿದ ಹಾಗೆ ಅಡ್ಬಿಟ್ರು! ನಾನೇನು ಪ್ರತಿಕ್ರಿಯೆ ನೀಡಲಿಲ್ಲ, ನನ್ಗೇನು ಏನಾದ್ರೂ ಮಾಡ್ಕೊಳ್ಳಿ ಅಂತ ಅಂದುಕೊಂಡು ಸುಮ್ಮನಾಗಿ ಕುಳಿತೆ. ನನಗೆ ಒಂದು ಕ್ಷಣ ಕೋಪ ಬಂತು ಆದ್ರೆ ಏನು ಮಾಡೋದು ಮನಸಲ್ಲಿ ನನ್ಗೆ ನಾನೇ ಬೈದುಕೊಂಡೆ. 

ಈ ಘಟನೆ ಬಳಿಕ ಬಸ್ಸಿನಲ್ಲಿ ಸೀಟು ಕೊಡೋ ಸಾಹಸ ಮಾಡೋದು ಬೇಡವೇ ಬೇಡ ಅಂತ ಅನ್ಸ್ತು ಗೊತ್ತಾ. ಅಲ್ಲ ಅದೆಷ್ಟೋ ಸಲ ಕಂಡಕ್ಟರ್ ವಿದ್ಯಾರ್ಥಿಗಳಿಗೆ ಬೈಯೋದು ನೋಡಿದ್ದೀನಿ ಹಿರಿಯರಿಗೆ, ವಯಸ್ಸಾದವರಿಗೆ ಸೀಟು ಬಿಟ್ಟು ಕೊಡಿ ಹಾಗೆ ಹೀಗೆ ಅಂತ. ನಾವಾಗಿಯೇ ಸೀಟು ಬಿಟ್ಟುಕೊಟ್ಟಾಗ ಹೀಗೆಲ್ಲ ಆದ್ರೆ ಹೇಗೆ ಅನ್ಸುತ್ತೆ ಹೇಳಿ? 
ಎಲ್ಲರೂ ಹೀಗೆ ಇರ್ತಾರೆ ಅಂತ ನನ್ ಹೇಳ್ತಿಲ್ಲ ಆದ್ರೆ ಹೀಗೂ ಕೆಲವರು ಇದ್ದಾರೆ ಅಂತ ನಾನು ಹೇಳೋದು. ಇದು ನಾನು ಬರಿ ಮಾತಿಗೆ ಹೇಳಿದ ಕಥೆ ಅಲ್ಲ, 5 ವರ್ಷಗಳ ಹಿಂದೆ ನಾನು ಪಿಯುಸಿ ಓದುತ್ತಿರುವಾಗ ನಡೆದ ಘಟನೆ. ಈಗಲೂ ಬಸ್ಸಿನಲ್ಲಿ ಹೋಗುವಾಗ ಸೀಟು ಕೊಡೋ ಸಂದರ್ಭ ಬಂದಾಗ ಈ ಘಟನೆ ನನ್ನ ನೆನಪಿಗೆ ಬರುತ್ತೆ.
ನಿಮಗೂ ಬಸ್ಸಿನಲ್ಲಿ ಈ ತರ ಯಾವತ್ತಾದರೂ ಆಗಿರೋದು ಇದ್ಯಾ?! 


5 comments: