ಆದರ್ಶ್ ಮತ್ತು ಆಕಾಶ್ ಇಬ್ಬರು ಅಣ್ಣ ತಮ್ಮಂದಿರು, ಇವರಿಬ್ಬರ ಮುದ್ದಿನ ತಂಗಿ ಅಮೃತ. ಅಣ್ಣಂದಿರಿಗೆ ತಂಗಿ ಅಂದರೆ ಪಂಚಪ್ರಾಣ ಆದರೆ ತಂಗಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ ಕಾಳಜಿ ಏನೂ ಇರಲಿಲ್ಲ, ಅವಳಿಗೆ ತನ್ನ ಬಗ್ಗೆ ಮಾತ್ರ ಆಲೋಚನೆ. ಅಪ್ಪ ಅಮ್ಮ ಮೇಲೂ ಅಷ್ಟೊಂದು ಪ್ರೀತಿ ಕಾಳಜಿ ಇರಲಿಲ್ಲ.
ಅಮೃತ ನೋಡುವುದಕ್ಕೆ ತುಂಬಾ ಸುಂದರವಾಗಿ ಇದ್ದಳು ತುಂಬಾ ಜಾಣೆ, ತರಗತಿಯಲ್ಲಿ ಆಕೆಯೇ ಎಲ್ಲದರಲ್ಲೂ ಪ್ರಥಮ. ಎಲ್ಲವು ತನ್ನಿಂದಲೇ ಅನ್ನುವ ಜಂಬ ಆಕೆಗೆ. ತಮ್ಮ ತಂಗಿಯ ಚರುಕುತನ ನೋಡಿ ಅಣ್ಣಂದಿರಿಗೆ ತುಂಬಾ ಖುಷಿ, ಆಕೆಗೆ ಏನು ಬೇಕಿದ್ದರೂ ಅದನ್ನು ತಂದುಕೊಡುತ್ತಿದ್ದರು. ಅಮೃತ ತನಗೆ ಏನಾದರು ಬೇಕಾದಾಗ ಮಾತ್ರ ಅವರ ಹತ್ತಿರ ಮಾತನಾಡುತ್ತಿದ್ದಳು ಬೇರೆ ಸಮಯದಲ್ಲಿ ಅವರ ಕಡೆ ನೋಡುತ್ತಲೇ ಇರಲಿಲ್ಲ ಆಕೆ ಹೀಗಿದ್ದರೂ ಕೂಡ ಅಣ್ಣಂದಿರಿಗೆ ಅವಳ ಮೇಲೆ ಯಾವ ಕೋಪ ಬೇಜಾರು ಇರಲಿಲ್ಲ. ಅಮ್ಮ ಆಕೆಗೆ ಎಷ್ಟು ಬುದ್ಧಿಮಾತು ಹೇಳುತ್ತಿದ್ದರೂ ಆಕೆ ಅದಕ್ಕೆಲ್ಲ ಕಿವಿಗೊಡುತ್ತಿರಲಿಲ್ಲ.
ಒಂದು ಬಾರಿ ಪರೀಕ್ಷೆಯಲ್ಲಿ ಅಮೃತಳಿಗಿಂತ ಅವಳ ಸ್ನೇಹಿತೆಗೆ ಜಾಸ್ತಿ ಅಂಕ ಸಿಕ್ಕಿತ್ತು ಅದೇ ಮೊದಲ ಬಾರಿಗೆ ಅವಳು ತರಗತಿಗೆ ದ್ವಿತೀಯ ಸ್ಥಾನ ಪಡೆದಿದ್ದು ಇಲ್ಲ ಅಂದರೆ ಯಾವಾಗಲೂ ಅವಳೇ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ಅಂದು ಆಕೆ ಕೋಪದಿಂದ ಮನೆಗೆ ಬಂದು ಊಟ ಮಾಡದೇ ಅಳುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಎಷ್ಟು ಹೇಳಿದರು ಅವರ ಮಾತು ಕೇಳಲಿಲ್ಲ ಆದರ್ಶ್ ಏನೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಆಕಾಶ್ ಆಕೆಗೆ ಪ್ರೀತಿಯಿಂದ ಸಮಾಧಾನ ಮಾಡಲು ಯತ್ನಿಸಿದ ಆದರೆ ಆಕೆ ಅಳುತ್ತಲೇ ಕೂತಿದ್ದಳು ಅಲ್ಲದೇ ಅಣ್ಣ ಎಂದು ನೋಡದೆ ಎದುರು ಮಾತನಾಡಿಬಿಟ್ಟಳು. ಆಕಾಶ್ ಸ್ವಲ್ಪ ಮುಂಗೋಪಿ ಆಗಿದ್ದರು ಕೂಡ ತನ್ನ ತಂಗಿಯ ಬಳಿ ಕೋಪ ತೋರಿಸಿಕೊಂಡಿರಲಿಲ್ಲ ಆದರೆ ಆ ದಿನ ಆಕೆ ಏಷ್ಟು ಹೇಳಿದರೂ ಸಮಾಧಾನವಾಗಲಿಲ್ಲ ಈ ಕಡೆ ಆಕಾಶ್ ಕೋಪ ನೆತ್ತಿಗೇರಿತ್ತು ಆದರೂ ಅದನ್ನು ಸಹಿಸಿಕೊಂಡು ಅಳುತ್ತಾ ಆಚೆ ಬಂದು ತನ್ನ ಅಣ್ಣ ಆದರ್ಶನಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ. ಆತನ ಧ್ವನಿಯಲ್ಲಿ ಅವನ ದುಃಖ ಅಣ್ಣನಿಗೆ ಅರ್ಥವಾಗಿತ್ತು. ಆದರ್ಶ್ ತನ್ನ ಕೆಲಸ ಬಿಟ್ಟು ಬೇರೆ ಊರಿಂದ ಮನೆಗೆ ಬಂದ ಆತನಿಗೂ ಕೋಪ ಬೇಜಾರು ಆಗಿತ್ತು. ಅದಾದ ಮೇಲೆ ಅವರು ತಂಗಿಯ ಜೊತೆ ಮಾತು ಬಿಟ್ಟಿದ್ದರು ಸಮಯವೇ ಆಕೆಗೆ ಬುದ್ಧಿ ಕಲಿಸಬೇಕು ಆಗ ಅವಳಿಗೆ ಎಲ್ಲದರ ಅರಿವು ಆಗುತ್ತದೆ ಎಂದು ಇಬ್ಬರೂ ಸುಮ್ಮನಾಗಿದ್ದರು.
ಅಣ್ಣಂದಿರು ಮಾತು ಬಿಟ್ಟಿದ್ದಕ್ಕೆ ಅವಳಿಗೆ ಬೇಜಾರು ಆಗಲಿಲ್ಲ ಅವಳು ಮೊದಲಿನಂತೆ ತನ್ನ ಪಾಡಿಗೆ ಆರಾಮಾಗಿ ಇದ್ದಳು. ಆದರೆ ಆದರ್ಶ್ ಮತ್ತು ಆಕಾಶ್ ಮಾತ್ರ ತಮ್ಮ ತಂಗಿ ಬಂದು ಮಾತನಾಡುತ್ತಾಳೆ ಅವಳಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದುಕೊಂಡಿದ್ದರು. ಇಂತಹ ಅಣ್ಣಂದಿರು ಸಿಗುವುದಕ್ಕೆ ಎಷ್ಟು ಪುಣ್ಯ ಮಾಡಿರಬೇಕು ಆದರೆ ಅಣ್ಣಂದಿರ ಪ್ರೀತಿ ಕಾಳಜಿ ಆಕೆಗೆ ಅರ್ಥವೇ ಆಗುತ್ತಿರಲಿಲ್ಲ.
ತಮ್ಮ ಮಗಳ ವರ್ತನೆಯಿಂದ ಅಪ್ಪ ಅಮ್ಮಗೂ ಕೂಡ ಬೇಜಾರು. ಎಷ್ಟು ಜಾಣೆ ಆದರೇನು ಈ ತರಹ ವರ್ತನೆ ಜಂಬ, ಸೊಕ್ಕು ಒಳ್ಳೆಯದಲ್ಲ. ಯಾವಾಗ ಇದರ ಅರಿವು ಆಕೆಗೆ ಆಗುತ್ತದೆ ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು.
ತಿಂಗಳುಗಳೇ ಕಳೆಯಿತು ಆದರೂ ಅಮೃತ ಅಣ್ಣಂದಿರ ಜೊತೆ ಮಾತನಾಡಲೇ ಇಲ್ಲ. ದಿನಗಳು ಕಳೆಯುತ್ತಿದ್ದವು ಆದರೆ ಆಕೆ ಮಾತ್ರ ಬದಲಾಗಲೇ ಇಲ್ಲ.
ಅಮೃತ ಸ್ನೇಹಿತೆ ಒಂದು ವಾರ ತರಗತಿಗೆ ಬರಲೇ ಇರಲಿಲ್ಲ ಆಕೆಗೆ ಏನಾಗಿರಬಹುದು ಎಂದು ತಿಳಿಯಲು ಆಕೆಯ ಮನೆಗೆ ಹೋದಳು, ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳ ಸ್ನೇಹಿತೆಯ ಅಣ್ಣ ತೀರಿ ಹೋಗಿದ್ದಾರೆ ಎಂದು. ತನ್ನ ಅಣ್ಣನನ್ನು ಕಳೆದುಕೊಂಡು ಬೇಸತ್ತು ಹೋಗಿದ್ದಳು ಆಕೆಯ ಸ್ನೇಹಿತೆ. ಕಣ್ಣುಗಳು ಕೆಂಪು ಕೆಂಪಾಗಿ ಹೋಗಿದ್ದವು ಅತ್ತು ಅತ್ತು, ಆಕೆಯನ್ನು ನೋಡುತಿದ್ದರೆ ನಮಗೂ ಕಣ್ಣು ತುಂಬಿ ಬರುವಂತಿತ್ತು. ನೋಡು ಅಮೃತ ನನಗಿದ್ದ ಒಬ್ಬ ಅಣ್ಣನನ್ನು ನಾನು ಕಳೆದುಕೊಂಡಿದ್ದೇನೆ ಆವನಿಗೆ ನಾನು ಎಂದರೆ ಜೀವ ಆದರೆ ಈಗ ಅವನೇ ನನ್ನ ಜೀವನದಿಂದ ದೂರ ಹೋಗಿದ್ದಾನೆ ಅವನಿಲ್ಲದೆ ನನಗೆ ಯಾವುದೂ ಬೇಡವಾಗಿದೆ ಅದಕ್ಕೆ ಕಾಲೇಜ್ ಕಡೆ ಬರಲು ಮನಸ್ಸು ಆಗುತ್ತಿಲ್ಲ, ನಿನಗೆ ನೋಡು ಇಬ್ಬರು ಅಣ್ಣಂದಿರು ಅದೆಷ್ಟು ಪ್ರೀತಿ ಮಾಡುತ್ತಾರೆ ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡ, ನನಗೆ ಗೊತ್ತು ನಿನಗೆ ಅಣ್ಣಂದಿರ ಬಗ್ಗೆ ಚೂರು ಪ್ರೀತಿ ಇಲ್ಲ ಆದರೆ ಅವರ ಪ್ರೀತಿಯ ಮನಸಿಗೆ ಎಂದೂ ನೋವು ಮಾಡಬೇಡ ಎಂದಳು ಅವಳ ಸ್ನೇಹಿತೆ. ಅಮೃತ ಏನೂ ಹೇಳದೆ ಹಾಗೆ ಸುಮ್ಮನೆ ಮನೆಗೆ ನಡೆದಳು. ಆ ದಿನ ರಾತ್ರಿ ಅಮೃತಗೆ ತನ್ನ ಅಣ್ಣ ಆಕಾಶ್ ಗೆ ರಸ್ತೆ ಅಪಘಾತ ಆಗಿ ಅವನು ಸಾಯುವ ಕನಸು ಬಿತ್ತು ಗಾಬರಿಯಿಂದ ಎಚ್ಚರವಾಗಿ ನಂತರ ತನ್ನ ಅಣ್ಣನ ಕೋಣೆಗೆ ಓಡಿ ಹೋಗುತ್ತಾಳೆ. ಅವಳ ಕಣ್ಣುಗಳು ತುಂಬಿ ಹೋಗಿದ್ದವು ತನ್ನ ಸ್ನೇಹಿತೆಗೆ ಆದಂತೆ ಅವಳಿಗೂ ಆಗಿ ಹೋಯಿತೇ ಅನ್ನುವ ಭಯ ಅವಳ ಕಣ್ಣಿನಲ್ಲಿ ಇತ್ತು. ಅಣ್ಣ ಕೋಣೆಯಲ್ಲಿ ಆರಾಮಾಗಿ ಮಲಗಿದ್ದನು ಕಂಡು ಸಮಾಧನಾಗೊಂಡಳು. ಮರುದಿನ ಬೆಳಗ್ಗೆ ತನ್ನ ಅಣ್ಣಂದಿರನ್ನು ಕರೆದು ಕ್ಷಮೆ ಕೇಳಿದಳು ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅತ್ತಳು. ಅಣ್ಣಂದಿರಿಗೆ ಆಶ್ಚರ್ಯ ಧಿಡೀರ್ ಆಗಿ ಹೇಗೆ ಈಕೆಗೆ ಎಲ್ಲಿಲ್ಲದ ಪ್ರೀತಿ ಬಂತು ಎಂದು. ಅವರ ನಂಬಿಕೆಯಂತೆ ಕಾಲವೇ ಅವಳಿಗೆ ಎಲ್ಲದರ ಅರಿವು ಮೂಡಿಸಿತು. ಅಪ್ಪ ಅಮ್ಮನಿಗೂ ತಮ್ಮ ಮಗಳ ಬದಲಾವಣೆಯಿಂದ ಖುಷಿ ಆಗಿತ್ತು. ಅಮೃತ ಪೂರ್ತಿಯಾಗಿ ಬದಲಾಗಿ ತನ್ನ ಅಣ್ಣಂದಿರ ಜೊತೆಗೆ ಖುಷಿಯಾಗಿ ಇದ್ದಳು.
ಇದೊಂದು ನನ್ನ ಕಲ್ಪನೆಯ ಕಥೆ ಅಷ್ಟೇ ಆದರೆ ನಿಜ ಜೀವನದಲ್ಲೂ ಹೀಗೆ ಆಗುತ್ತಾ ಇರುತ್ತದೆ. ಅಣ್ಣ - ತಂಗಿ ಆಗಿರಲಿ ಅಥವಾ ಯಾವುದೇ ಸಂಭಂಧಗಳು ಆಗಿರಲಿ ನಾವು ಅವರ ಜೊತೆ ಅನ್ಯೋನ್ಯವಾಗಿ ಇರಬೇಕು. ಇನ್ನೊಬ್ಬರು ನಮ್ಮ ಮೇಲೆ ತೋರಿಸುವ ಪ್ರೀತಿ, ಕಾಳಜಿಗೆ ಪ್ರತಿಯಾಗಿ ನಾವು ಅವರನ್ನು ಪ್ರೀತಿಯಿಂದ ಕಾಣಬೇಕು ಪ್ರೀತಿ ಇಲ್ಲವಾದರೂ ಅವರ ಭಾವನೆಗೆ ಮನಸ್ಸಿಗೆ ನೋವು ಉಂಟುಮಾಡಬಾರದು. ಕಳೆದುಕೊಂಡ ಮೇಲೆ ಅಥವಾ ದೂರ ಆದ ಮೇಲೆ ಅವರನ್ನು ನೆನೆದು ಆಳುವ ಬದಲು ನಾವು ಕಳೆದುಕೊಳ್ಳುವ ಮೊದಲೇ ಅವರ ಜೊತೆ ಚೆನ್ನಾಗಿ ಖುಷಿಯಾಗಿ ಇರಬೇಕು.
True💯🥰👌
ReplyDeleteThank youu😇
Delete👌👌
ReplyDelete