Sunday, June 18, 2023

ಇವರು ತುಂಬಾನೇ ಸ್ಪೆಷಲ್! ಇವರ ಜೊತೆ ಮಾತನಾಡಿದರೆ ಏನೋ ಒಂತರ ಖುಷಿ. ಮನಸ್ಸಿಗೆ ಏನಾದ್ರು ಬೇಜಾರಾದ್ರೆ ಅದನ್ನ ಇವರ ಜೊತೆ ಹೇಳಿಕೊಂಡರೆ ಅದೇನೋ ಒಂತರಾ ಸಮಾಧಾನ, ಮನಸಿನ ಭಾರ ಕಳೆದುಕೊಂಡ ಹಾಗೆ ಆಗುತ್ತೆ. ಪ್ರತಿ ದಿನ ಆಗೋ ಸಣ್ಣ ಪುಟ್ಟ ವಿಷಯಗಳನ್ನು ಅವರ ಜೊತೆ ಹಂಚಿಕೊಳ್ತೀವಿ. ಅದೇನೇ ವಿಷಯ ಇರ್ಲಿ, ಅದೇನೇ ಸಂದರ್ಭ ಆಗಿರ್ಲಿ ಯಾವಾಗ್ಲೂ ನಮ್ಮ ಜೊತೆ ಇರ್ತಾರೆ.ಒಂದೊಂದು ಸಲ ನಾವು ಬೇಜಾರಾಗಿ ಸುಮ್ನೆ ಇದ್ದು ಏನು ಹೇಳದೇ ಇದ್ರು ಅವರು ಅದನ್ನು ಅರ್ಥ ಮಾಡಿಕೊಳ್ತಾರೆ. ಅದೇ ಕಾರಣಕ್ಕೆ ತಾನೇ ಅವ್ರು ಅಂದ್ರೆ ನಮಗೆ ಅಷ್ಟು ಇಷ್ಟ ಆಗೋದು. ತಾವು ಎಷ್ಟೇ ಬೇಜರಾಗಿದ್ರು ಅದನ್ನ ನಮ್ಮ ಜೊತೆ ಹೇಳಿಕೊಳ್ಳಲ್ಲ, ಯಾವಾಗ್ಲೂ ನಮ್ಮನ ನಗಿಸೋ ಪ್ರಯತ್ನ ಮಾಡ್ತಾರೆ

Monday, June 12, 2023

ಕ್ರಷ್ ಕಹಾನಿ

ಕ್ರಷ್ ಅಂತೆ ಕ್ರಷ್! ಹೌದು ಎಲ್ಲರ ಲೈಫ್ ಅಲ್ಲಿ ಒಬ್ರು ಕ್ರಷ್ ಅಂತ ಇದ್ದೇ ಇರ್ತಾರೆ ಬಿಡಿ. ಆದ್ರೆ ನನ್ ಬೆಸ್ಟ್ ಫ್ರೆಂಡ್ ಇದ್ದಾಳೆ  ಇವಳಿಗೆ ಇರೋ ಕ್ರಷ್ ಒಂದಲ್ಲ ಎರಡಲ್ಲ, ಒಂದು ದೊಡ್ಡ ಲಿಸ್ಟ್ ಇದೆ. ನನಗೆ ಅನ್ಸತ್ತೆ ನ್ನನ್ನ ಫ್ರೆಂಡ್ ಲಿಸ್ಟ್ ಗಿಂತ ಜಾಸ್ತಿ ಇವಳ ಕ್ರಷ್ ಲಿಸ್ಟ್ ಇದೆ ಅಂತ!  ಅವ್ಳು ಪ್ರತಿ ಸಲ ಬಂದು ಕ್ರಷ್ ಬಗ್ಗೆ ಹೇಳಬೇಕಾದರೆ ನನಗೆ ಕನ್ಫ್ಯೂಷನ್ ಆಗುತ್ತೆ ಇವ್ಳು ಯಾವ ಕ್ರಷ್ ಬಗ್ಗೆ ಹೇಳ್ತಾ ಇದ್ದಾಳೆ ಅಂತ! ಆದ್ರೂ ಇವಳ ಕ್ರಷ್ ಸ್ಟೋರಿ ಕೇಳೋಕೆ ಒಂತರಾ ಮಜಾ ಇರುತ್ತೆ. ಅವಳು ಪ್ರತಿ ಸಲ ಕ್ರಷ್ ಬಗ್ಗೆ ಹೇಳಬೇಕಾದರೆ ಒಂದೊಂದ್ ಸಲ ನನಗೂ ನನ್ನ ಕ್ರಷ್ ನೆನಪಾಗುತ್ತೆ.
ಕ್ರಷ್ ನೋಡಿದ್ರೆ ಸಾಕು ಅದೇನೋ ಖುಷಿ ಅವಳಿಗೆ, ಒಂದು ನೋಟ ಸಾಕು ನಾಚಿ ನೀರಾಗಿ ಹೋಗ್ತಾಳೆ. ಏನಾದ್ರೂ ಅವನು ಬಂದು ಮಾತನಾಡಿಸಿದರೆ ಅಬ್ಬಾ ಇವಳು ಭೂಮಿ ಬಿಟ್ಟು ಆಕಾಶದಲ್ಲಿ ತೇಲಿ ಹೋಗಬಹುದು, ಅದು ಸಹಜನೇ ಅಲ್ವಾ ಏನೋ ಒಂತರಾ ಖುಷಿ ಆಗುತ್ತೆ. 
ಇವತ್ತು ಯಾಕೋ ಖುಷಿಯಲ್ಲಿ ಇದ್ಲು ಯಾಕೆ ಅಂತ ಕೇಳಿದ್ರೆ ಕ್ರಷ್ ನೋಡಿದೆ ಅಂತ ಹೇಳಿದ್ಲು , ಅದೇನು ಖುಷಿ ಅದೇನು ನಾಚಿಕೆ ಆಹಾ!  

ಅವಳ  ಹೃದಯ ಚಿಟ್ಟೆಯಾಗಿ 
ಹಾರಿ ಹೋಗಿದೆ  ಅವನ ಹಿಂದೆ
ಆದರೂ  ಅವನು ತಿರುಗಿ ನೊಡಲಿಲ್ಲ
ಹಾಗಂತ ಇವಳು ಸುಮ್ಮನೆ ಇರುವುದಿಲ್ಲ
Instagram ಅಲ್ಲೆ request ಕಳುಹಿಸಿ ಬಿಟ್ಟಳಲ್ಲ
ಆದರೂ ಪಾಪ ಅವನು request ಇನ್ನೂ accept ಮಾಡಲಿಲ್ಲ !
ಅವಳ ಕ್ರಷ್ ಬಗ್ಗೆ ಜಾಸ್ತಿ  ಹೇಳಿದ್ರೆ ಪಾಪ ಅವನಿಗೆ ದೃಷ್ಟಿ ಆಗಬಹುದು ಆಮೇಲೆ ನನಗೆ ಬೈತಾಳೆ ನನ್ನ ಫ್ರೆಂಡ್ ಇಷ್ಟು ಸಾಕು ಅನ್ಸತ್ತೆ. ಅಂದ ಹಾಗೆ ನಿಮಗೆ ನಿಮ್ಮ ಕ್ರಷ್ ನೆನಪಾಯ್ತ?  ನನಗಂತೂ ಆಯ್ತು... 
ಇಷ್ಟೆಲ್ಲಾ ಹೇಳಿದ ಮೇಲೆ ಏನ್ ನೋಡ್ತಾ ಇದ್ದೀರಾ? ನಿಮ್ಮ ಸ್ನೇಹಿತರಿಗೆ  ಇದನ್ನು ಕಳುಹಿಸಿ. ನಿಮ್ಮ ಕ್ರಷ್ ಗೆ ಕಳುಹಿಸಿದರೂ ಪರ್ವಾಗಿಲ್ಲ ಬಿಡಿ, ಯಾರಿಗೆ ಗೊತ್ತು ಅವರಿಗೂ ನಿಮ್ಮ ಕ್ರಷ್ ಇದ್ರು ಇರಬಹುದು..

Sunday, April 23, 2023

ಅತ್ತು ಸೋತಿದೆ ಈ ಹೃದಯ
ನಿನಗೆ ಇದರ ಅರಿವಿದೆಯಾ
ಈ ನೋವಿಗೆ ಬೇಕಿದೆ ಸಾಂತ್ವಾನ
ನೀ ನೀಡುವೆಯಾ ನಗುವಿನ ಆಹ್ವಾನ 

Sunday, December 12, 2021

🎶🤗♥

ನಮ್ಮ ಮನಸ್ಥಿತಿ ಯಾವಾಗಲೂ ಒಂದೇ ತರ ಇರಲ್ಲ ಆಗಾಗ ಯಾವುದೋ ಕಾರಣಕ್ಕೆ ಏರುಪೇರು ಆಗುತ್ತಾ ಇರುತ್ತದೆ ನಾವು ಇಂಗ್ಲೀಷ್ ಅಲ್ಲಿ ಮೂಡ್ ಸ್ವಿಂಗ್ಸ್ ಅಂತೀವಲ್ಲ ಅದೇ. ಕೆಲವೊಂದು ಸಲ ನಮ್ಮ ಮನಸ್ಸಿಗೆ ತುಂಬಾ ಬೇಜಾರಾದಾಗ ನಮಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ ಒಂಟಿಯಾಗಿ ಇರಲು ಬಯಸುತ್ತೇವೆ. ಮನಸ್ಸಿಗೆ ಸಮಾಧಾನ ಆಗುವಂತೆ ಮಾಡಲು ಏನಾದರೂ ಮಾಡುತ್ತೇವೆ. ನಮಗೆ ಮೂಡ್ ಸರಿ ಇಲ್ಲ ಅಂತ ಅನಿಸಿದಾಗಲೆಲ್ಲ ನಾವು ಹೆಚ್ಚಾಗಿ ನಮಗೆ ಇಷ್ಟ ಆಗುವ ಹಾಡನ್ನು ಕೇಳಲು ಬಯಸುತ್ತೇವೆ. ಸಂಗೀತಕ್ಕೆ ಮನಸ್ಸಿಗೆ ಮುದ ನೀಡುವ ಒಂದು ಶಕ್ತಿಯಿದೆ. ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಹೊಸ ಹುರುಪು ಉತ್ಸಾಹ ತುಂಬುತ್ತದೆ.  
ಹಾಗಾಗಿ ಮೂಡ್ ಸರಿ ಇಲ್ಲದ ಸಮಯದಲ್ಲಿ ಕೇಳೋಕೆ ಅಂತಾನೆ ನಮ್ಮ ಪ್ಲೇಲಿಸ್ಟ್ ಕೆಲವೊಂದು ಹಾಡುಗಳು ಇರುತ್ತೆ. 
ನನಗೆ ಬೇಜಾರಾದಾಗ, ಮನಸ್ಸು ಸರಿ ಇಲ್ಲ ಅಂತ ಅನಿಸುವಾಗ ಅಥವಾ ಏನೋ ಭಯ, ಚಿಂತೆ ಕಾಡಿದಾಗ ನಾನು ಜಾಸ್ತಿ ಕೇಳುವ ಕೆಲವು ಹಾಡುಗಳು ಈ ಕೆಳಗಿನಂತೆ ಇದೆ.

1.  ಅರಳುವ ಹೂವುಗಳೇ



▪ ಚಿತ್ರ: ಮೈ ಆಟೋಗ್ರಾಫ್ (2006)
▪ ಹಾಡು : ಅರಳುವ ಹೂವುಗಳೇ
▪ ಗಾಯಕಿ :  ಕೆ.ಎಸ್ ಚಿತ್ರಾ
▪ ಸಂಗೀತ : ಭಾರದ್ವಾಜ್
▪ ಸಾಹಿತ್ಯ : ಕೆ. ಕಲ್ಯಾಣ್

2006ರಲ್ಲಿ ತೆರೆ ಕಂಡ ಮೈ ಆಟೋಗ್ರಾಫ್ ಚಿತ್ರದ ಈ ಹಾಡು ಅಂದ್ರೆ ಎಲ್ಲರಿಗೂ ಇಷ್ಟ.. ಈ ಹಾಡಿನಲ್ಲಿ ಅಂತಹ ಸೆಳೆತ ಇದೆ, ಮನಸ್ಸಿಗೆ ಧೈರ್ಯ ತುಂಬುವ ಶಕ್ತಿ ಇದೆ, ನೋವುಗಳ ಮರೆಸಿ ನಗು ತರುವ ಸಾಮರ್ಥ್ಯ ಇದೆ.  ಈ ಹಾಡನ್ನು ಈಗ ಕೇಳಿದರು ಅದೇ ಹೊಸತನ 
 ಅದೇ ಅನುಭವ ಅಗುತ್ತದೆ.

2. ಏನಾಗಲಿ ಮುಂದೆ ಸಾಗು ನೀ


▪ ಚಿತ್ರ : ಮುಸ್ಸಂಜೆ ಮಾತು(2008)
▪ ಹಾಡು : ಏನಾಗಲಿ ಮುಂದೆ ಸಾಗು ನೀ
▪ ಗಾಯಕ : ಸೋನು ನಿಗಮ್
▪ ಸಾಹಿತ್ಯ :ವಿ. ಶ್ರೀಧರ್
https://youtu.be/f6636xqsLGc
ಮುಸ್ಸಂಜೆ ಮಾತು ಚಿತ್ರ  ಅಂದ ಕೂಡಲೇ ನೆನಪಾಗುವುದೇ ಈ ಹಾಡು. ಈ ಹಾಡು  ಎಲ್ಲರ ಅಚ್ಚುಮೆಚ್ಚು.  ಈಗಲೂ ಕೆಲವರ ಫೋನಿನಲ್ಲಿ  ಇದೇ ಹಾಡು callertune ಇದೆ.

3. ಹಾರು ಹಾರು
▪ ಚಿತ್ರ : ನಿನ್ನಿಂದಲೇ(2014)
▪ ಹಾಡು : ಹಾರು ಹಾರು
▪ ಗಾಯಕರು : ಸ್ವೀಕರ್, ಚೈತ್ರಾ ಹೆಚ್.ಜಿ
▪ ಸಾಹಿತ್ಯ : ಕವಿರಾಜ್

ನಿನ್ನಿದಲೇ ಚಿತ್ರದ ಈ ಹಾಡು ನನಗೆ ತುಂಬಾ ಇಷ್ಟ. 
ಹಾರು ಹಾರು ಹಾರು ರೆಕ್ಕೆ ಬಿಚ್ಚಿ ಹಾರು ಬಿಟ್ಟು ಬಿಡೆ ಇನ್ನು ಬೇಜಾರು
ನೂರು ಕೊಹಿನೂರು ನೀನು ನಕ್ರೆ ಚೂರು ನಕ್ಕು ಬಿಡೆ
ಈಗ ಒಂಚೂರು
ನೀ ನಕ್ಕರೆ ನಗುವುದು ಜಗವಿದು ಕನ್ನಡಿ
ಮುನ್ನಡೆಯುತ ಹೋದರೆ ಗುರಿಗಳು  ಕಾಲಡಿ
ಏನಾದ್ರೂ take it easy 
ಗೆಲ್ಲೋಕೆ ಇಲ್ಲಿ ಬಾಜಿ
ಏಷ್ಟು ಚೆನ್ನಾಗಿದೆ ಈ ಸಾಲುಗಳು.. 

4. ಪವರ್ ಆಫ್ ಯೂತ್



▪ ಚಿತ್ರ: ಯುವರತ್ನ (2021)
▪ ಹಾಡು: ಪವರ್ ಆಫ್ ಯೂಥ್
▪ ಗಾಯಕ: ನಕಾಶ್ ಅಜೀಜ್
▪ ಸಾಹಿತ್ಯ: ಸಂತೋಷ್ ಆನಂದ್ರಾಮ್
▪ ಸಂಗೀತ: ತಮನ್ ಎಸ್
ಈ ಹಾಡಿನ ಶೀರ್ಷಿಕೆಯಂತೆ  ಹಾಡಿನಲ್ಲಿ ಪವರ್ ಇದೆ. ಯುವ ಜನತೆಗೆ ಹೇಳಿ ಮಾಡಿಸಿರುವ ಹಾಗಿದೆ ಈ ಹಾಡು. ಸಂತೋಷ್ ಆನಂದ್ರಾಮ್ ಅವರು ಅದ್ಬುತವಾಗಿ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪ್ರತಿ ಚಿತ್ರದಲ್ಲಿಯೂ ಇಂತಹದೊಂದು ಪವರ್ಫುಲ್ ಹಾಡು ಇದ್ದೇ   ಇರುತ್ತದೆ.

5.ಕುಟ್ಟಿ ಸ್ಟೋರಿ

▪ ಚಿತ್ರ : ಮಾಸ್ಟರ್ (2020)
▪ ಹಾಡು : ಕುಟ್ಟಿ ಸ್ಟೋರಿ
▪ ಗಾಯಕರು : ದಳಪತಿ ವಿಜಯ್ ಮತ್ತು ಅನಿರುದ್ಧ ರವಿಚಂದರ್
▪ ಸಂಗೀತ : ಅನಿರುದ್ಧ ರವಿಚಂದರ್
▪ಅರುಣರಾಜ ಕಾಮರಾಜ್ 

ಕುಟ್ಟಿ ಸ್ಟೋರಿ ಹಾಡು ಅಂದ್ರೆ ನನಗೆ ತುಂಬಾ ತುಂಬಾ ಇಷ್ಟ. ಈ ಹಾಡು ರಿಲೀಸ್ ಆದ ದಿನದಿಂದ ಈಗಿನವರೆಗೆ ಅದೆಷ್ಟು ಸಲ ಕೇಳಿದ್ದೀನೋ ಗೊತ್ತಿಲ್ಲ ಆದರೆ ಪ್ರತಿ ದಿನ ಈ ಹಾಡು ಕೇಳ್ತಾ ಇರ್ತೀನಿ. ಕೇಳಿದಷ್ಟು ಮತ್ತೆ ಕೇಳಬೇಕು ಅನಿಸುತ್ತೆ. ಮೂಡ್ ಸರಿ ಇಲ್ಲ ಅಂದ್ರೆ ಈಗ ಮೊದಲು ನೆನಪಾಗುವ ಹಾಡು ಅಂದ್ರೆ ಇದೇನೇ.   ನಾನು ಈ ಹಾಡಿನ ಅಭಿಮಾನಿ.
Life is very short nanba
Always be happy 

6. ಇದುವುಂ ಕಡಂದು ಪೋಗುಂ


▪ ಚಿತ್ರ : ನೆಟ್ರಿಕನ್(2021)
▪ ಹಾಡು: ಇದುವುಂ ಕಡಂದು ಪೋಗುಂ
▪ ಗಾಯಕ: ಸಿದ್ ಶ್ರೀರಾಮ್
▪ ಸಂಗೀತ ಸಂಯೋಜನೆ: ಗಿರೀಶ್
▪ ಸಾಹಿತ್ಯ:  ಕಾರ್ತಿಕ್ ನೇತಾ
ಸಿದ್ ಶ್ರೀರಾಮ್ ಅವರು ಹಾಡಿರುವ ಈ ಹಾಡು 2021ರಲ್ಲಿ ತೆರೆ ಕಂಡ netrikann ಚಿತ್ರದ ಹಾಡು. ಈ ಚಿತ್ರ ನೋಡಿದವರಿಗೆ ಈ 
ಹಾಡು ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.

ಮನಸಿನ ನೋವನ್ನು ಗುಣಪಡಿಸುವ, ಹೊಸ ಭರವಸೆ ತರಿಸುವ, ಏನೋ ಹೊಸ ಉತ್ಸಾಹ ತುಂಬುವ ಹಾಡುಗಳಿವು. ಈ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ.
ಇದೇ ಥರ ನಿಮಗೂ ಇಷ್ಟ ಆಗುವ ಹಾಡುಗಳು ಬೇರೆ ಇರಬಹುದು ಆ ಹಾಡುಗಳು ನಿಮಗೆ ಧೈರ್ಯ ತುಂಬಹುದು ಖುಷಿ ತರಬಹುದು.


ನಾನು ಹೇಳಿರುವ ಹಾಡುಗಳಲ್ಲಿ ಕೆಲವು   ಹಾಡು ನಿಮಗೆ ಹೊಸದಾಗಿದ್ದರೆ ಅದನ್ನು ಈಗಲೇ  ಕೇಳಿ ನೋಡಿ ನಿಮಗೂ ಇಷ್ಟವಾಗಬಹುದು. ಒಂದು ಬಾರಿ ಹಾಗೆ ಕಮೆಂಟ್ಸ್  ಕಡೆಗೆ ಕಣ್ಣು ಹಾಯಿಸಿ ಅದೆಷ್ಟೋ ಜನ ಈಗಲೂ ಹಳೆಯ ಹಾಡುಗಳನ್ನು ಕೇಳಿ ಆನಂದಿಸುತ್ತಾರೆ ನೋವುಗಳನ್ನು ಮರೆಯುತ್ತಾರೆ.





Monday, November 01, 2021

 ಯಾವುದು ಇಲ್ಲಿ ಶಾಶ್ವತ?

ಯಾವುದು ಇಲ್ಲಿ ನಮ್ಮ ಸ್ವಂತ?

ಈ ಬದುಕೆನ್ನುವುದೇ ಒಂದು ರೋಚಕ!

ಮುಂದೇನಾಗುವುದೋ ಎಂಬುದು ಪ್ರಶ್ನಾರ್ಥಕ ?

ಈ ಕ್ಷಣವನ್ನು ಅನುಭವಿಸುತ,

ನಗು ಪ್ರೀತಿಯನು ಹಂಚುತ

ಬದುಕೋಣ ನಮ್ಮ  ಈ ಜೀವಿತ...

Saturday, October 23, 2021

ರತ್ನನ್ ಪ್ರಪಂಚ

 ರತ್ನನ್ ಪ್ರಪಂಚ ಚಿತ್ರದಲ್ಲಿ ತಾಯಿ ಮಗನ ಬಾಂಧವ್ಯವನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಎಲ್ಲಾ ಪಾತ್ರವು ಅದರದೇ ಆದ ಪ್ರಾಮುಖ್ಯತೆ ಹೊಂದಿದೆ. ರತ್ನಾಕರ ಪಾತ್ರಕ್ಕೆ ಧನಂಜಯ್ ಅವರ ಜೀವ ತುಂಬಿ ಇನ್ನೊಂದು ಬಾರಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಇನ್ನು ಉಡಾಲ್ ಬಾಬು ರಾವ್ ಪಾತ್ರವನ್ನು ಬಹಳ ಅದ್ಬುತವಾಗಿ ಪ್ರಮೋದ್ ಅವರು ನಿರ್ವಹಿಸಿ ಎಲ್ಲರ ಮನ ಗೆದ್ದಿದ್ದಾರೆ. 



ತನಗೆ ಜನುಮ ನೀಡಿದ ತಾಯಿಯ ಹುಡುಕಾಟದಲ್ಲಿ ಅಲೆಮಾರಿಯಂತೆ ಸಾಗುವ ರತ್ನಾಕರ ಕೊನೆಗೆ ಕಳೆದುಕೊಳ್ಳುವುದು ತನಗೆ ಜೀವವಾಗಿದ್ದ ತಾಯಿಯನ್ನು. ಪ್ರಪಂಚ ತುಂಬಾ ವಿಶಾಲವಾಗಿರಬಹುದು ಆದರೆ ತಾಯಿಯ ಪ್ರೀತಿ ಮಮತೆಯಷ್ಟು ವಿಶಾಲವಾದ ಪ್ರಪಂಚ ಯಾವುದು ಇಲ್ಲ. 

ನಮ್ಮಲ್ಲಿ ಇಲ್ಲದಿರುವುದನ್ನು ಹುಡುಕುತ್ತಾ ಹೋದರೆ ಕೊನೆಗೆ ನಮ್ಮ ಜೊತೆ ಇರುವುದನ್ನು ಕಳೆದುಕೊಳ್ಳುತ್ತೇವೆ. ವಸ್ತು ಅಥವಾ ವ್ಯಕ್ತಿ ನಮ್ಮ ಜೊತೆ ಇರುವಾಗಲೇ ಜೋಪಾನ ಮಾಡಬೇಕು ನಮ್ಮಿಂದ ದೂರವಾದ ಮೇಲೆ ಅಥವಾ ಕಳೆದುಕೊಂಡ ಮೇಲೆ ವಿಷಾದಿಸಿ ಏನು ಪ್ರಯೋಜನ.?ನಾವುಗಳು ಹಾಗೆ ತಾನೇ ಹಂಬಲ, ಕುತೂಹಲ, ಸಂತೋಷದ ಹುಡುಕಾಟದಲ್ಲಿ ಕಳೆದುಕೊಳ್ಳುವುದು ಮಾತ್ರ ನೆಮ್ಮದಿಯನ್ನು.. 

ರತ್ನನ್ ಪ್ರಪಂಚಕ್ಕೆ ಒಂದು ಸಾರಿ ಭೇಟಿ ನೀಡಿ ಖಂಡಿತ ಅವನ ಪ್ರಪಂಚ ನಿಮಗೆ ಇಷ್ಟ ಆಗುತ್ತೆ. ಈ ಚಿತ್ರ ನೋಡುವಾಗ ರತ್ನಾಕರನ ಅಲೆಮಾರಿ ಪಯಣದಲ್ಲಿ ನಾವು ಒಂದು ಭಾಗ ಅಂತ ಅನಿಸುತ್ತೆ. ನಗು ಇದೆ, ಅಳುವು ಇದೆ, ಒಳ್ಳೆಯ ಹಾಡುಗಳು ಇದೆ. ಭಾವುಕರಾಗ್ತೀರ. ಒಂದು ಪರಿಪೂರ್ಣ ಚಿತ್ರ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ . ಮಿಸ್ ಮಾಡದೆ ನೋಡಿ 

Tuesday, October 19, 2021

ಈ ಬದುಕಲಿ ಗೆಲುವು
 ತುಂಬಿದೆ ನೀನು
ತೋರುತಾ ಒಲವು
ಈ ಕಣ್ಣಲಿ ಕನಸು
ಮನಸಲಿ ಹುರುಪು
ತಂದಿಹೆ ನೀನು
ಜೊತೆಯೇ ನೀನಿರಲು ಹೀಗೆ
ನಿನ್ನ ಜೊತೆಯಾಗಿ ನಾ ನಿಲ್ಲುವೆ 
ನನ್ನ ಹಾಡು, ನನ್ನ ಪಾಡು
ನನ್ನ ಬದುಕೇ ನೀನು ಎಂದಿಗೂ...