Thursday, June 10, 2021

ನಾಯಿ


ನಾಯಿ ಅಂತ ಹೇಳಿದ್ರೆ ಸಾಕು ಆ ಮುದ್ದಾದ, ಮುಗ್ಧವಾದ ಮುಖ ನೆನಪಾಗುತ್ತದೆ. ನಾಯಿ ತುಂಬಾ ನಿಯತ್ತಿನ ಪ್ರಾಣಿ ಅದಕ್ಕೆ ಮನುಷ್ಯರ ಹಾಗೆ ಸ್ವಾರ್ಥ, ಅಸೂಯೆ, ಜಂಬ, ಕಪಟತನ ಎಲ್ಲ ತಿಳಿದಿಲ್ಲ. ನಿಷ್ಠೆ, ನಿಯತ್ತು, ಪ್ರೀತಿ, ಅಷ್ಟೇ ತಿಳಿದಿರುತ್ತದೆ. 
ಮನೆಯಲ್ಲಿ ನಾಯಿ ಒಂದು ಇದ್ದರೆ ಅದಕ್ಕಿಂದ ದೊಡ್ಡ ರಕ್ಷಕ ಬೇರೆ ಬೇಕಾಗಿಲ್ಲ. ಯಾವಾಗಲೂ ಮನೆಗೆ ಕಾವಲುಗಾರನಾಗಿ ಇರುತ್ತದೆ. ಈ ನಗರಗಳಲ್ಲಿ ಹೇಗೋ ನನಗೆ ಗೊತ್ತಿಲ್ಲ ಆದರೆ ಹಳ್ಳಿಯ ಪ್ರತಿ ಮನೆಗಳಲ್ಲಿ ಒಂದು ನಾಯಿ ಇದ್ದೇ ಇರುತ್ತದೆ.
 ನಾಯಿಯನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರು ಇದ್ದಾರೆ. ಒಂಟಿಯಾಗಿ ಇರುವವರ ಮನೆಯಲ್ಲಿ ಒಂದು ನಾಯಿ ಆದ್ರು ಇರುತ್ತೆ. ಅದೆಷ್ಟೋ ಜನ ತಮ್ಮ ಪುಟ್ಟ ಮಕ್ಕಳಿಗೆ ಆಟಿಕೆ ಬದಲು ಪುಟ್ಟ ನಾಯಿ ಮರಿ ತಂದು ಕೊಡುತ್ತಾರೆ. ಮಕ್ಕಳಿಗೂ ಅಷ್ಟೆ ಆಟಿಕೆಗಿಂತ ನಾಯಿ ಮರಿನೇ ಜಾಸ್ತಿ ಇಷ್ಟ ಆಗೋದು. ಅದಕ್ಕೆ ಇರಬಹುದು ಕೆಲವರಿಗೆ ಬಾಲ್ಯದಿಂದ ನಾಯಿ ಅಂದ್ರೆ ತುಂಬಾ ಇಷ್ಟ.
ನಾಯಿಗಿಂತ ಒಳ್ಳೆ ಸ್ನೇಹಿತ/ಸ್ನೇಹಿತೆ ಬೇರೆ ಬೇಕಾಗಿಲ್ಲ ಅದರ ಜೊತೆ ಸಮಯ ಕಳೆಯುತ್ತಿದ್ದರೆ ನಮಗೆ ಹೊರಗಿನ ಪ್ರಪಂಚವೇ ಮರೆತು ಹೋಗುತ್ತದೆ. ನೀವು ಬೇಸರವಾಗಿ ಇದ್ದರೆ ಅದಕ್ಕೆ ಅರ್ಥ ಆಗುತ್ತದೆ, ಅದರ ಕಣ್ಣುಗಳಲ್ಲಿ ಕಾಣೋ ಆ ಹನಿ ಕಣ್ಣೀರು ನೀವು ಗಮನಿಸಿದ್ದೀರಾ? ನೀವು ಖುಷಿ ಆಗಿದ್ದರೆ ಅದು ಕೂಡ ಖುಷಿಯಾಗಿ ಇರುತ್ತದೆ ನೀವು ಬೇಸರವಾಗಿ  ಇದ್ರೆ ಅದಕ್ಕೂ ದುಃಖ ಆಗುತ್ತದೆ. ಒಟ್ಟಾರೆಯಾಗಿ ನಾಯಿಗೆ ನಿಮ್ಮ ಪ್ರತಿ ಭಾವನೆಗಳು ಅರ್ಥ ಆಗುತ್ತೆ. ನಾಯಿಗೆ ಮಾತು ಬಾರದಿರಬಹುದು ಆದರೆ ನಿಮ್ಮ ಮೌನದ ಮಾತು ಅದಕ್ಕೆ ಅರಿವಾಗುತ್ತದೆ. ನಾಯಿಗೂ ಮಾತಾಡಲು ಆಗುತ್ತಿದ್ದರೆ ಎಷ್ಟು ಚೆನ್ನಾಗಿ ಇರೋದು ಅಲ್ವಾ.
ನೀವು ಅದನ್ನು ಎಷ್ಟು ಪ್ರೀತಿಸುವಿರೋ ಅದರ ದುಪ್ಪಟ್ಟು ಪ್ರೀತಿ ನಿಮ್ಮ ಮೇಲೆ ನಾಯಿಗೆ ಇರುತ್ತದೆ. ನೀವು ಕೋಪದಿಂದ ಹೊಡೆದರು ಹೊಡೆಸಿಕೊಳ್ಳುತ್ತದೆ ನೋವಾದರೂ ಅತ್ತು ಸುಮ್ಮನಾಗುತ್ತದೆ. ನಾಯಿಗಿರೋಷ್ಟು ತಾಳ್ಮೆ ನಮಗೆಲ್ಲಿದೆ ಹೇಳಿ! ನಮಗೆ ತಾಳ್ಮೆ ಅನ್ನೋದು ದೂರದ ಮಾತು.
ನಾವು ಮನೆಯಿಂದ ಆಚೆ ಹೋದಾಗ ನಮ್ಮ ಬರುವಿಕೆಗಾಗಿ ಕಾಯುತ್ತಾ ಕುಳಿತಿರುತ್ತದೆ, ನಾವು ಹಿಂತಿರುಗುತ್ತಿದ್ದಂತೆ ನಮ್ಮ ಹತ್ತಿರ ಓಡಿ ಬಂದು ಬಾಲ ಅಲ್ಲಾಡಿಸುತ್ತದೆ, ನೋಡಿ ಅದೆಷ್ಟು ಪ್ರೀತಿ ನಮ್ಮ ಮೇಲೆ. ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮನ್ನು ನಿರ್ಲಕ್ಷಿಸಿಸಬಹುದು ಆದರೆ ನೀವು ಸಾಕಿದ ನಾಯಿ ನಿಮ್ಮನ್ನು ಯಾವತ್ತೂ ನಿರ್ಲಕ್ಷಿಸುವುದಿಲ್ಲ. 
ಅದೆಷ್ಟು ಸರಳ ಜೀವಿ ನಾಯಿ, ನೋಡಿ ನಮಗೆ ತಿನ್ನೋದಕ್ಕೆ ಬಗೆ ಬಗೆ ತಿಂಡಿ ಬೇಕು ಅದು ಕೂಡ ಫ್ರೆಶ್ ಆಗಿ ಇರಬೇಕು ಇನ್ನೂ ಕೆಲವರಿಗೆ ಮನೆಯಲ್ಲಿ ಮಾಡಿದ ತಿಂಡಿ ಊಟ ಸೇರಲ್ಲ ಅವರಿಗೆ ಹೋಟೆಲ್ ರೆಸ್ಟೋರೆಂಟ್ ಊಟ ಮಾತ್ರ ಸೇರೋದು. ನಾಯಿ ಹಾಗಲ್ಲ ನಾವ್ ತಿನ್ನೋದಕ್ಕೆ ಎನು ಕೊಟ್ಟರೂ ಸುಮ್ಮನೆ ತಿನ್ನುತ್ತೆ. ಅದೆಷ್ಟೋ ಸಲ ಅಮ್ಮ ನಮ್ಮನ್ನು ರೇಗಿಸೋದಕ್ಕೆ ಒಂದು ಮಾತು ಹೇಳ್ತಾರೆ "ನಿನ್ನ ಸಾಕುವ ಬದಲು ಇನ್ನೂ ಒಂದು ನಾಯಿನ ಸಾಕಿ ಊಟ ಹಾಕಿದರೆ ಅದು ಮನೆ ಆದ್ರೂ ಕಾಯುತ್ತೆ ಅಂತ." ಹಹಹ ಅಮ್ಮ ಹೇಳೋದು ಒಂತರಾ ಸರಿಯೇ ಅನ್ಸುತ್ತೆ!
ನಾವು ಸಾಕಿದ ನಾಯಿಯನ್ನು ಕಳೆದುಕೊಂಡಾಗ ಅದೆಷ್ಟು ಬೇಜಾರು, ದುಃಖ, ನೋವು ಆಗುತ್ತದೆ ಅಲ್ವಾ. ಕೆಲವರಿಗೆ ನಾಯಿ ಬರಿ ಪ್ರಾಣಿ ಅಷ್ಟೇ ಅಲ್ಲ ಪ್ರಾಣ ಆಗಿರುತ್ತೆ. 
ನಮಗೆ ನಾಯಿಯ ಭಾಷೆ ಅರ್ಥ ಆಗದೇ ಇರಬಹುದು ಆದರೆ ನಮ್ಮ ಮಾತು ಅದಕ್ಕೆ ಚೆನ್ನಾಗಿ ಅರ್ಥ ಆಗುತ್ತದೆ. ನಾಯಿಗೆ ಇರುವಷ್ಟು ಬುದ್ದಿ ಏಷ್ಟೋ ಮನುಷ್ಯರಿಗೆ ಇರುವುದಿಲ್ಲ. ನಾಯಿಯಿಂದ ನಾವು ಕಲಿಯಬೇಕಾಗಿರುವುದು ತುಂಬಾನೇ ಇದೆ.


7 comments: