Tuesday, October 12, 2021

 ಮನಸ್ಸು ಎಂಬ ಅಂಗಳಕ್ಕೆ 

ನೆಮ್ಮದಿ ಎಂಬ ರಂಗವಲ್ಲಿ ಬಿಡಿಸುತ್ತಿದೆ

ಅದೆಲ್ಲಿಂದಲೋ ಕಷ್ಟ ಎಂಬ ಬಿರುಗಾಳಿ ಬೀಸಿ

 ಎಲ್ಲವನ್ನೂ ಅಳಿಸಿ ಹಾಕಿದೆ


Saturday, October 02, 2021

 ಚಿಂತೆಗು ಚಿಂತೆಯಾಗುವಂತೆ ಮರೆ ನಿನ್ನ ಚಿಂತೆಗಳ !

ಮರೆವಿಗು ನೆನಪಾಗದಂತೆ ಮರೆ ಎಲ್ಲ ಚಿಂತೆಗಳ !

Saturday, September 18, 2021

ಅಮ್ಮ




 ಅಮ್ಮ ಎಂದರೆ ನನ್ನಮ್ಮ

ನಿನಗಾರು ಸಾಟಿ ಇಲ್ಲಮ್ಮ

ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ

ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ


ನನಗಾಗಿ ನೀನೆಷ್ಟು ಶ್ರಮಿಸುವೆ

ನನಗೆ ನೋವಾದರೆ ನೀನಳುವೆ

ನನ್ನ ಖುಷಿ ನೋಡಿ ನೀ ನಗುವೆ

ನನಗೆ ಒಳಿತಾಗಲಿ ಎಂದು ಬಯಸುವೆ


ನೀ ಮಾಡುವೆ ನನಗೆ ಸಹಾಯ

ಹೋಗಲಾಡಿಸುವೆ ನನ್ನ ಭಯ

ನನ್ನ ನಿನ್ನ ನಡುವೆ ಪ್ರೀತಿಯ ವಿನಿಮಯ

ಸದಾ ಹೀಗೆ ಇರಲಿ ನಮ್ಮ ಈ ಬಾಂಧವ್ಯ


ಆ ದೇವರು ಹೇಗಿದ್ದಾನೋ ನಾ ಅರಿಯೆನೆ

ನನ್ನ ಪಾಲಿನ ದೇವತೆ ನೀನೇನೆ

ನಾ ಸದಾ ಪ್ರೀತಿಸುವೆ ನಿನ್ನನ್ನೇ

ನೀನಿರದೆ ನಾ ಬರಿ ಶೂನ್ಯನೇ


ನನ್ನ ಜೀವನ ನಿನಗೆಂದೆ ಅರ್ಪಿತ

ನಾ ಬಯಸುವೆ ನಿನ್ನ ಹಿತ

ನಾನೆಂದಿಗೂ ನಿನ್ನ ಸ್ವಂತ

ಅಮ್ಮ ನೀನಿರು ಸದಾ ನಗುನಗುತಾ


Monday, September 13, 2021

  


ನನಗೆ ಮೊದಲಿನಿಂದಲೂ ಮೂವಿ ನೋಡೋ ಹುಚ್ಚು . ಸಮಯ ಸಿಕ್ಕಾಗಲೆಲ್ಲಾ ಮೂವಿ ನೋಡುತ್ತಿರುತ್ತೇನೆ. ಒಂದು ಒಳ್ಳೆ ಮೂವಿ ನೋಡಿದ್ರೆ ಅದೇನೋ ಸಮಾಧಾನ, ಖುಷಿ ಆಗುತ್ತೆ. ಮೂವಿ ನೋಡುತ್ತಾ ಇರಬೇಕಾದರೆ ವಾಸ್ತವವನ್ನು ಮರೆತು ಸಿನೆಮಾ ಪ್ರಪಂಚದಲ್ಲಿ ಮುಳುಗಿ ಹೋಗಿರುತ್ತವೆ. 


ಕೆಲವೊಂದು ಸಲ ಬೋರ್ ಆಗುತ್ತದೆ ಎಂದು ಮೂವಿ ನೋಡಿದರೆ ಇನ್ನೂ ಕೆಲವು ಸಲ ಮೂವಿ ನೋಡಿ ಬೋರ್ ಆಗುವುದು ಉಂಟು. ಒಬ್ಬೊಬ್ಬರಿಗೆ ಒಂದೊದು ತರಹದ ಮೂವಿ ಇಷ್ಟ ಆಗುತ್ತೆ. ನಾನು ನನಗೆ ಸಸ್ಪೆನ್ಸ್ ಥ್ರಿಲ್ಲರ್ ಮೂವೀಸ್ ಅಂದ್ರೆ ಜಾಸ್ತಿ ಇಷ್ಟ. ಕೆಲವು ಮೂವೀಸ್ ನಮ್ಮ ಮನಸಿನ ಮೇಲೆ ಜಾಸ್ತಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಪಾತ್ರ ಆಗಿರಬಹುದು ಅಥವಾ ಕೆಲವು ಸನ್ನಿವೇಶಗಳು ನಮಗೆ ವಾಸ್ತವದಲ್ಲಿ ಸಂಬಂಧಿಸಿದಂತೆ ಅನಿಸುತ್ತದೆ, ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ.




 ಲಾಕ್ಡೌನ್ ಸಮಯದಲ್ಲಿ ಬರೀ ಮೂವೀಸ್ ನೋಡಿದ್ದೆ ಆಯ್ತು. ಹೊಸ ಮೂವೀಸ್ OTT ರಿಲೀಸ್ ಆಗುತ್ತಿದ್ದಂತೆ ಅದನ್ನು ನೋಡುವ ಕಾತುರ ಜಾಸ್ತಿ ಹಾಗೆ ದಿನ ಒಂದು ಮೂವಿ ನೋಡುತ್ತಿದ್ದೆ. 






2020-2021ರಲ್ಲಿ ನನಗೆ ಇಷ್ಟವಾದ ಕೆಲವು ಮೂವೀಸ್ ಇವು. 


Dia


Love mocktail


Gypsy


Kannum Kannum Kollaiyadithaal


Oh My Kadavule


Penguin


Soorarai Pottru


Ala Vaikunthapurramloo


 Ashwathama


HIT: The First Case


Ninnila Ninnila


Yuvaratna 


Teddy


Karnan


Netrikann


Shershah


Tuck Jagadish




ನನಗೆ ಇಷ್ಟವಾದ ಮೂವಿ ನಿಮಗೆ ಇಷ್ಟವಾಗದೇ ಇರಬಹುದು!



Sunday, September 12, 2021

ಪರೀಕ್ಷೆ

ಪರೀಕ್ಷೆ ಅಂದರೆ ಯಾರಿಗೆ ತಾನೇ ಭಯ, ಚಿಂತೆ ಇರಲ್ಲ ಹೇಳಿ? ಅದೆಷ್ಟು ಸಲ ಪರೀಕ್ಷೆ ಬರೆದಿದ್ದರು ಪ್ರತೀ ಸಲ ಪರೀಕ್ಷೆ ಬರೆಯಲು ಹೋದಾಗ ಅದೇ ಚಿಂತೆ,ಅದೇ ಭಯ ಕಾಡುತ್ತದೆ.ಕೆಲವರಿಗೆ ಪರೀಕ್ಷೆ ಭಯದಿಂದ ಜ್ವರನೇ ಬರುತ್ತೆ.ಇನ್ನು ಕೆಲವರಂತೂ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದಿಕೊಂಡು ಬಂದಿರುತ್ತಾರೆ. ನಿದ್ದೆ ಬಿಟ್ಟು ತಲೆ ನೋವು ಒಂದು ಕಡೆ ಇರುತ್ತೆ ಇನ್ನೊಂದು ಕಡೆ ಭಯ. ಯಪ್ಪಾ ನನಗೆ ನಿದ್ದೆ ಬಿಟ್ಟು ಓದುವುದು ಅಂದ್ರೆ ಆಗಲ್ಲ ಚೆನ್ನಾಗಿ ನಿದ್ದೆ ಮಾಡಿದ್ರೆ ಮಾತ್ರ ನನಗೆ ಪರೀಕ್ಷೆ ಬರೆಯೋದಕ್ಕೆ ಆಗೋದು. ರಾತ್ರಿ ನಿದ್ದೆಗಾಗಿ ಓದುವುದನ್ನು ಬಿಟ್ಟು ಮಲಗಿದ್ದು ಉಂಟು ಆದರೆ ಓದುವುದಕಾಗಿ ನಿದ್ದೆ ಬಿಟ್ಟು ಓದಿದ ಪ್ರಸಂಗ ಬಾರಿ ಕಡಿಮೆ. ಆ ಕಡೆ ನಿದ್ದೇನು ಇಲ್ಲ ಈ ಕಡೆ ಸರಿಯಾಗಿ ಓದುವುದಕ್ಕೂ ಆಗಲ್ಲ. ನಿದ್ದೆ ಕೆಟ್ಟು ಪರೀಕ್ಷೆ ಬರೆಯೋದಕ್ಕೆ ಹೋದರೆ ನಾನು ಪರೀಕ್ಷೆ ಬರೆಯೋ ಬದಲು ನಿದ್ದೆ ಮಾಡ್ತೇನೆ ಅಷ್ಟೇ. ಈ ನಿದ್ದೆ ಬಿಟ್ಟು ಓದಿಕೊಂಡು ಚೆನ್ನಾಗಿ ಪರೀಕ್ಷೆ ಬರಿಯೋದು ತುಂಬಾನೇ ಕಷ್ಟ ಇದೆಲ್ಲ ನಿಭಾಯಿಸಿಕೊಂಡು ಪರೀಕ್ಷೆ ಬರೆಯೋರೆಲ್ಲ ತುಂಬಾನೇ ಗ್ರೇಟ್ ಅನ್ಸತ್ತೆ ನನಗೆ ಯಾಕಂದ್ರೆ ನನಗೆ ಹೇಗೆ ನಿದ್ದೆ ಬಿಟ್ಟು ಓದೋದು ತುಂಬಾನೇ ಕಷ್ಟದ ಕೆಲಸ.


ಚಿತ್ರಕೃಪೆ - ಅಂತರ್ಜಾಲ


ಇನ್ನು ಈ ಪರೀಕ್ಷೆ ಶುರು ಆಗುವ 30 ನಿಮಿಷದ ಮೊದಲೇ ನಮ್ಮನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುತ್ತಾರೆ, ಆ 30 ನಿಮಿಷಗಳಲ್ಲಿ ಆಗೋ ಭಯ ಅಷ್ಟಿಷ್ಟಲ್ಲ ಪ್ರಶ್ನೆಪತ್ರಿಕೆ ಸುಲಭವಾಗಿ ಇರುತ್ತೋ ಅಥವಾ ಕಷ್ಟವಾಗಿ ಇರುತ್ತೋ ಹಾಗೆ ಹೀಗೆ ಏನೇನೋ ಆಲೋಚನೆಗಳು ತಲೆಯಲ್ಲಿ ಓಡುತ್ತಾ ಇರುತ್ತೆ. ಪ್ರಶ್ನೆಪತ್ರಿಕೆ ಕೈಗೆ ಸಿಗುವಷ್ಟರಲ್ಲಿ ನಾವು ಓದಿದ್ದು ಭಯ ಅನ್ನುವ ನದಿಯಲ್ಲಿ ಕೊಚ್ಚಿ ಹೋಗಿರುತ್ತೆ ಅಷ್ಟೇ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಮೇಲೆ ಒಂದು ಸಲ ಪೂರ್ತಿಯಾಗಿ ಎಲ್ಲಾ ಪ್ರಶ್ನೆಗಳತ್ತ ಕಣ್ಣು ಹಾಯಸಲು ಆರಂಭಿಸಿದಾಗ, ಮೊದಲನೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅಲ್ಲಿಗೆ ಕಥೆ ಮುಗಿಯಿತು ಬಾಕಿ ಗೊತ್ತಿರುವ ಉತ್ತರಗಳು ಮರೆತು ಹೋಗುತ್ತೆ. ಉತ್ತೀರ್ಣರಾಗಬೇಕಾದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹಾಗೆ ಬದಿಗಿರಿಸಿ ಮುಂದಿನ ಪ್ರಶ್ನೆಗೆ ಜಿಗಿಯಬೇಕಲ್ಲವೇ! ಏನೋ  ಗೊತ್ತಿರುವಷ್ಟು, ನೆನಪಿಗೆ ಬಂದಷ್ಟು ಬರೆದು ಮುಗಿಸಬೇಕು ಅಷ್ಟೇ. ಗೊತ್ತಿರುವಷ್ಟು ಬರೆದು ಮುಗಿಸಿ ಆಚೆ ಕಣ್ಣು ಹಾಯಿಸಿದರೆ ಎಲ್ಲರೂ ಗಂಭೀರವಾಗಿ ಉತ್ತರಪತ್ರಿಕೆಯಲ್ಲಿ ಬರೆಯುತ್ತಿದ್ದರೆ ನಾನು ಮಾತ್ರ ಉತ್ತರ ತಿಳಿಯದೇ ಏನು ಬರೆಯೋದು ಅನ್ನುವ ಚಿಂತೆಯಲ್ಲಿ ಮುಳುಗಿದ್ದೆ . ಆದರೆ ಏನು ಮಾಡುವುದು ಈ ಪರೀಕ್ಷೆ ಎಂಬ ಯುದ್ಧದ್ದಲ್ಲಿ ನಾವು ಒಂಟಿಯಾಗಿಯೇ ಹೊರಾಡಬೇಕು ಯಾರು ನಮ್ಮ ನೆರವಿಗೆ ಬರುವುದಿಲ್ಲ ಬರಲಾಗುವುದು ಇಲ್ಲ. ಉತ್ತಮ ಅಂಕ ಪಡೆಯಬೇಕು ಇಲ್ಲ ಕನಿಷ್ಟ ಪಕ್ಷ ಉತ್ತೀರ್ಣರಾಗಿ ಪರೀಕ್ಷೆ ಎಂಬ ಯುದ್ಧ ಗೆಲ್ಲಬೇಕು, ಅದಕ್ಕಾಗಿ 3 ಗಂಟೆ ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು ಹಿಡಿದು ಉತ್ತರಪತ್ರಿಕೆಯಲ್ಲಿ ತಲೆ ಉಪಯೋಗಿಸಿ ಏನೋ ಉತ್ತರ ಬರೆಯಬೇಕು. ಸರಿಯಾಗಿ ನಿದ್ದೇನು ಮಾಡದೆ ಸರಿಯಾಗಿ ಓದೋಕೂ ಆಗದೆ ಚಡಪಡಿಸಿವುದಕ್ಕಿಂತ ಆರಾಮಾಗಿ ಮಲಗಿ ಆದಷ್ಟು ಓದುದುವುದೇ ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಆಮೇಲೆ ನಿದ್ದೆ ಬಿಟ್ಟು ತಲೆ ಕೆಟ್ಟು ಪರೀಕ್ಷೆ ಬರೆಯೋ 

ಹೇಗೋ ಏನೋ 3 ಗಂಟೆ ಕಳೆದು ಪರೀಕ್ಷಾ ಕೊಠಡಿಯಿಂದ ಆಚೆ ಬರುವ ಹೊತ್ತಿಗೆ ತಲೆ ನೋವು ಶುರು ಆಗಿರುತ್ತೆ. ಆಚೆ ಬಂದು ನೋಡಿದರೆ ಸಾಕು ಕೆಲವರು ಪ್ರಶ್ನೆಪತ್ರಿಕೆಯ ಉತ್ತರಗಳ ಬಗ್ಗೆ ಚರ್ಚಿಸಲು ಶುರು ಮಾಡಿಕೊಂಡಿರುತ್ತಾರೆ , ಮೊದಲೇ ಉತ್ತರ ಗೊತ್ತಿಲದೇ ಏನೋ ಒಂದು ಉತ್ತರ ಬರೆದು ಬಂದಿರುತ್ತೇವೆ ಇನ್ನು ಇವರ ಚರ್ಚೆ ಕೇಳಿದ್ರೆ ಇರೋ ತಲೆ ಕೆಡುವುದು ಪಕ್ಕಾ. ಆಮೇಲೆ ತಲೆ ಕೆಟ್ಟರೆ ಮುಂದಿನ ಪರೀಕ್ಷೆ ಬರೆಯೋದು ಯಾರು ಅಲ್ವಾ? ಅದಕ್ಕೆ ನಾನು ಪರೀಕ್ಷಾ ಕೊಠಡಿಯಿಂದ ಆಚೆ ಬಂದ ನಂತರ ಬ್ಯಾಗ್ ಹಾಕಿಕೊಂಡು ಸೀದ ಮನೆಗೆ ಹೊರಡೋದು. 

ಇನ್ನು ಮನೆಗೆ ಬಂದ ತಕ್ಷಣ ಅಮ್ಮ ಕೇಳುವ ಮೊದಲ ಪ್ರಶ್ನೆನೇ "ಹೇಗಿತ್ತು ಇವತ್ತಿನ ಪರೀಕ್ಷೆ? ಚೆನ್ನಾಗಿ ಬರೆದೆ ತಾನೇ ಒಳ್ಳೆ ಅಂಕ ಸಿಗುತ್ತಾ ಇಲ್ವಾ"? ಹೀಗೆ ಅಮ್ಮ ಕೇಳೋದು ಹೊಸತೇನಲ್ಲ ಯಾವಾಗ್ಲೂ ಇದೇ ತರ ಕೇಳೋದು ಅಂತ ನನಗೆ ಗೊತ್ತು,ಅದಕ್ಕೆ ನಾನು ಉತ್ತರ ರೆಡಿ ಮಾಡಿಕೊಂಡಿರುತ್ತೇನೆ. ಅಯ್ಯೋ ಅಮ್ಮಾ ಇವತ್ತಿನ ಪರೀಕ್ಷೆ ಎಷ್ಟು ಕಷ್ಟ ಇತ್ತು ಯಾವುದಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ,ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಕಷ್ಟ ಆಗಿತ್ತು. ಕಡಿಮೆ ಅಂಕ ಬಂದ್ರೆ ಬೈಯೋದ್ಯಕ್ಕೆ ರೆಡಿ ಆಗಿರು ಅಮ್ಮ ಅಂತ ಹೇಳುತ್ತಿದ್ದೆ ನಾನು ಹೀಗೆ ಹೇಳೋದು ಹೊಸತೇನಲ್ಲ ನಾನು ಪ್ರತಿ ಸಲ ಇದೇ ಮಾತು ಹೇಳುತ್ತಿದ್ದೆ ಅದು ಅಮ್ಮನಿಗೂ ಗೊತ್ತಿರುವ ವಿಚಾರ. ಅಮ್ಮ ಪಾಪ ಏನೂ ಹೇಳದೆ ನನಗೆ ಸಮಾಧಾನ ಮಾಡುತ್ತಿದ್ದರು. ಪರ್ವಾಗಿಲ್ಲ ಬಿಡು ಮುಂದಿನ ಸಲ ಚೆನ್ನಾಗಿ ಬರೆದು ಒಳ್ಳೆ ಅಂಕ ಪಡ್ಕೊಂಡ್ರೆ ಆಯ್ತು ಅಂತ ಹೇಳಿ ಸುಮ್ಮನಾಗುತ್ತಿದ್ರು. ನನ್ನ ಮಗಳಿಗೆ ಒಳ್ಳೆ ಅಂಕ ಬಂದು ಪಾಸ್ ಆಗ್ಲಿ ಅಂತ ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ ಅಂತ ಅವರಿಗೆ ಅಷ್ಟೇ ಗೊತ್ತು ಎಲ್ಲಾ ತಾಯಂದಿರು ಹೀಗೇನೇ...


ಪರೀಕ್ಷೆ ದಿನ ಆಗೋ ಭಯ ಒಂದು ರೀತಿ ಆದ್ರೆ ಇನ್ನು ಪರೀಕ್ಷೆ ಮುಗಿಸಿದ ಮೇಲೆ ಫಲಿತಾಂಶದ ಭಯ ಇನ್ನೊಂದು ರೀತಿ. ಯಾವುದೋ ಒಂದು ವಿಷಯದಲ್ಲಿ ಚೆನ್ನಾಗಿಯೇ ಬರೆದಿರ್ತಿವಿ ಆವಾಗ ಒಳ್ಳೆ ಅಂಕ ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ನಮಗೆ ಇರಲ್ಲ ಆದ್ರೆ ಯಾವುದೋ ವಿಷಯ ಕಷ್ಟ ಇದ್ದು ಆ ಪರೀಕ್ಷೆ ಚೆನ್ನಾಗಿ ಬರಿಯದೇ ಇದ್ದಾಗ ನಮಗೆ ಕಡಿಮೆ ಅಂಕ ಸಿಗಬಹುದು ಅಥವಾ ನಾವು ಫೇಲ್ ಆಗ್ತಿವಿ ಅನ್ನೋ ಕಾನ್ಫಿಡೆನ್ಸ್ ಅದೆಲ್ಲಿಂದ ಬರತ್ತೆ ಅನ್ನೋದು ಗೊತ್ತಾಗಲ್ಲ. ಇನ್ನು ಇವತ್ತು ಫಲಿತಾಂಶ ಪ್ರಕಟ ಆಗುತ್ತೆ ಅಂತ ತಿಳಿದಾಗ ಆಗೋ ಭಯ ಪರೀಕ್ಷೆ ಬರಿಯೋ ಸಮಯದಲ್ಲಿ ಆಗುವ ಭಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಾನು ಖಂಡಿತ ಫೇಲ್ ಆಗ್ತೀನಿ ಅನ್ನೋ ಭಯ. ಏನ್ ಮಾಡೋದು ಫಲಿತಾಂಶ ನೋಡಲೇಬೇಕು ಅಲ್ವಾ ಹೇಗೋ ಗಟ್ಟಿ ಮನಸ್ಸು ಮಾಡಿ ನೋಡಿದ್ರೆ ಪಾಸ್ ಅಂತ ಇರುತ್ತೆ. ನಾವ್ ಯಾವಾಗ ಫೇಲ್ ಅಗ್ತಿವಿ ಅಂತ ಅನ್ಕೊಂಡು ಇರ್ತೀವಿ ನೋಡಿ ಆವಾಗ ಪಾಸ್ ಅಂತ ಗೊತ್ತಾದಾಗ ಆಗೋ ಖುಷಿ , ಸಮಾಧಾನ, ನಾವ್ ಚೆನ್ನಾಗಿ ಪರೀಕ್ಷೆ ಬರ್ದು ಪಾಸ್ ಆದಾಗ ಸಿಗೋ ಖುಷಿಗಿಂತ ದುಪ್ಪಟ್ಟಾಗಿ ಇರುತ್ತೆ. ಪಾಸ್ ಅಂತ ಗೊತ್ತಾದಾಗ ಮೊದಲಿದ್ದ ಚಿಂತೆ ಭಯ ಆ ಕ್ಷಣದಲ್ಲಿ ಮಾಯ ಆಗುತ್ತೆ. ಪರೀಕ್ಷೆಯಲ್ಲಿ ನಾನು ಓದಿದ್ದು ಮರೆತು ಹೋಗಿ ನನ್ನ ಜ್ಞಾಪನಶಕ್ತಿ ನನಗೆ ಕೈ ಕೊಟ್ಟಿರಬಹುದು ಆದರೆ ನಾನು ನಂಬಿದ ದೇವರು ಕೈ ಕೊಟ್ಟಿಲ್ಲ. ಅಮ್ಮನ ಹರಕೆ ಮತ್ತು ಹಾರೈಕೆ ಎರಡು ಇದ್ದರೆ ಸಾಕು ನಮಗೆ ಯಾವತ್ತಿಗೂ ಯಾವ ವಿಷಯದಲ್ಲಿಯೂ ಸೋಲು ನಷ್ಟ ಉಂಟಾಗುವುದಿಲ್ಲ, ಹಾಗೊಂದು ವೇಳೆ ಫೇಲ್ ಆದರೂ ಅದಕ್ಕೆ ಚಿಂತೆ ಪಡಬೇಕಿಲ್ಲ ಮತ್ತೊಂದು ಸಲ ಪರೀಕ್ಷೆ ಬರೆದು ಇನ್ನೂ ಉತ್ತಮ ಅಂಕ ಪಡೆದುಕೊಳ್ಳಬಹುದು. ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ , ಜೀವನದಲ್ಲಿ ಎದುರಿಸಬೇಕಾದ ಪರೀಕ್ಷೆಗಳು ತುಂಬಾನೇ ಇವೆ. 

ನನಗೆ ಪವರ್ ಆಫ್ ಯೂಥ್ ಹಾಡಿನ ಸಾಲುಗಳು ನೆನಪಾಯಿತು ಅದೆಷ್ಟು ಚೆನ್ನಾಗಿದೆ ಮತ್ತು ಅಷ್ಟು ನಿಜವಾಗಿದೆ ಅದರ ಕೆಲವು ಸಾಲುಗಳು ನೀವೇ ನೋಡಿ.


ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ನಿನ್ನ ಬದುಕಿಗೆ ನೀನೇ ಕನ್ನಡಿ

ನಿನ್ನ ನಂಬಿ ಸಾಗು

 ಪಟ್ಟರೆ ಶ್ರಮವ

ಒಳ್ಳೆಯ ದಿನವ ಕಾಣುವೆ ನೀನು

ಪರೀಕ್ಷೆಯಲ್ಲಿ ಫೈಲ್ ಆಗೋದ್ರು

ಬದುಕು ಕಟ್ಟುವ.


ಪರೀಕ್ಷೆಯಲ್ಲಿ ಫೈಲ್ ಆದ್ರೂ ಪರ್ವಾಗಿಲ್ಲ ಬದುಕು ಕಟ್ಟೋದು ಮುಖ್ಯ. ಪರೀಕ್ಷೆ ಬಗ್ಗೆ ಜಾಸ್ತಿ ತಲೆ ಕೆಡೆಸಿಕಳ್ಳದೆ ಆರಾಮಾಗಿ ಬರೆಯಿರಿ. ಹಿಂದೆ ಆಗಿದ್ದು ಮುಂದೆ ಆಗುವುದು ಎಲ್ಲಾ ಒಳ್ಳೆಯದಕ್ಕೆ. ಏನಾಗಲಿ ಮುಂದೆ ಸಾಗುತ್ತಾ ಇರೋಣ ಅಷ್ಟೇ.

Monday, September 06, 2021

ಆದರ್ಶ್ ಮತ್ತು ಆಕಾಶ್ ಇಬ್ಬರು ಅಣ್ಣ ತಮ್ಮಂದಿರು, ಇವರಿಬ್ಬರ ಮುದ್ದಿನ ತಂಗಿ ಅಮೃತ. ಅಣ್ಣಂದಿರಿಗೆ ತಂಗಿ ಅಂದರೆ ಪಂಚಪ್ರಾಣ ಆದರೆ ತಂಗಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ ಕಾಳಜಿ ಏನೂ ಇರಲಿಲ್ಲ, ಅವಳಿಗೆ ತನ್ನ ಬಗ್ಗೆ ಮಾತ್ರ ಆಲೋಚನೆ. ಅಪ್ಪ ಅಮ್ಮ ಮೇಲೂ ಅಷ್ಟೊಂದು ಪ್ರೀತಿ ಕಾಳಜಿ ಇರಲಿಲ್ಲ. 

ಅಮೃತ ನೋಡುವುದಕ್ಕೆ ತುಂಬಾ ಸುಂದರವಾಗಿ ಇದ್ದಳು ತುಂಬಾ ಜಾಣೆ, ತರಗತಿಯಲ್ಲಿ ಆಕೆಯೇ ಎಲ್ಲದರಲ್ಲೂ ಪ್ರಥಮ. ಎಲ್ಲವು ತನ್ನಿಂದಲೇ ಅನ್ನುವ ಜಂಬ ಆಕೆಗೆ. ತಮ್ಮ ತಂಗಿಯ ಚರುಕುತನ ನೋಡಿ ಅಣ್ಣಂದಿರಿಗೆ ತುಂಬಾ ಖುಷಿ, ಆಕೆಗೆ ಏನು ಬೇಕಿದ್ದರೂ ಅದನ್ನು ತಂದುಕೊಡುತ್ತಿದ್ದರು. ಅಮೃತ ತನಗೆ ಏನಾದರು ಬೇಕಾದಾಗ ಮಾತ್ರ ಅವರ ಹತ್ತಿರ ಮಾತನಾಡುತ್ತಿದ್ದಳು ಬೇರೆ ಸಮಯದಲ್ಲಿ ಅವರ ಕಡೆ ನೋಡುತ್ತಲೇ ಇರಲಿಲ್ಲ ಆಕೆ ಹೀಗಿದ್ದರೂ ಕೂಡ ಅಣ್ಣಂದಿರಿಗೆ ಅವಳ ಮೇಲೆ ಯಾವ ಕೋಪ ಬೇಜಾರು ಇರಲಿಲ್ಲ. ಅಮ್ಮ ಆಕೆಗೆ ಎಷ್ಟು ಬುದ್ಧಿಮಾತು ಹೇಳುತ್ತಿದ್ದರೂ ಆಕೆ ಅದಕ್ಕೆಲ್ಲ ಕಿವಿಗೊಡುತ್ತಿರಲಿಲ್ಲ. 

ಒಂದು ಬಾರಿ ಪರೀಕ್ಷೆಯಲ್ಲಿ ಅಮೃತಳಿಗಿಂತ ಅವಳ ಸ್ನೇಹಿತೆಗೆ ಜಾಸ್ತಿ ಅಂಕ ಸಿಕ್ಕಿತ್ತು ಅದೇ ಮೊದಲ ಬಾರಿಗೆ ಅವಳು ತರಗತಿಗೆ ದ್ವಿತೀಯ ಸ್ಥಾನ ಪಡೆದಿದ್ದು ಇಲ್ಲ ಅಂದರೆ ಯಾವಾಗಲೂ ಅವಳೇ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ಅಂದು ಆಕೆ ಕೋಪದಿಂದ ಮನೆಗೆ ಬಂದು ಊಟ ಮಾಡದೇ ಅಳುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಎಷ್ಟು ಹೇಳಿದರು ಅವರ ಮಾತು ಕೇಳಲಿಲ್ಲ ಆದರ್ಶ್ ಏನೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಆಕಾಶ್ ಆಕೆಗೆ ಪ್ರೀತಿಯಿಂದ ಸಮಾಧಾನ ಮಾಡಲು ಯತ್ನಿಸಿದ ಆದರೆ ಆಕೆ ಅಳುತ್ತಲೇ ಕೂತಿದ್ದಳು ಅಲ್ಲದೇ ಅಣ್ಣ ಎಂದು ನೋಡದೆ ಎದುರು ಮಾತನಾಡಿಬಿಟ್ಟಳು. ಆಕಾಶ್ ಸ್ವಲ್ಪ ಮುಂಗೋಪಿ ಆಗಿದ್ದರು ಕೂಡ ತನ್ನ ತಂಗಿಯ ಬಳಿ ಕೋಪ ತೋರಿಸಿಕೊಂಡಿರಲಿಲ್ಲ ಆದರೆ ಆ ದಿನ ಆಕೆ ಏಷ್ಟು ಹೇಳಿದರೂ ಸಮಾಧಾನವಾಗಲಿಲ್ಲ ಈ ಕಡೆ ಆಕಾಶ್ ಕೋಪ ನೆತ್ತಿಗೇರಿತ್ತು ಆದರೂ ಅದನ್ನು ಸಹಿಸಿಕೊಂಡು ಅಳುತ್ತಾ ಆಚೆ ಬಂದು ತನ್ನ ಅಣ್ಣ ಆದರ್ಶನಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ. ಆತನ ಧ್ವನಿಯಲ್ಲಿ ಅವನ ದುಃಖ ಅಣ್ಣನಿಗೆ ಅರ್ಥವಾಗಿತ್ತು. ಆದರ್ಶ್ ತನ್ನ ಕೆಲಸ ಬಿಟ್ಟು ಬೇರೆ ಊರಿಂದ ಮನೆಗೆ ಬಂದ ಆತನಿಗೂ ಕೋಪ ಬೇಜಾರು ಆಗಿತ್ತು. ಅದಾದ ಮೇಲೆ ಅವರು ತಂಗಿಯ ಜೊತೆ ಮಾತು ಬಿಟ್ಟಿದ್ದರು ಸಮಯವೇ ಆಕೆಗೆ ಬುದ್ಧಿ ಕಲಿಸಬೇಕು ಆಗ ಅವಳಿಗೆ ಎಲ್ಲದರ ಅರಿವು ಆಗುತ್ತದೆ ಎಂದು ಇಬ್ಬರೂ ಸುಮ್ಮನಾಗಿದ್ದರು.

ಅಣ್ಣಂದಿರು ಮಾತು ಬಿಟ್ಟಿದ್ದಕ್ಕೆ ಅವಳಿಗೆ ಬೇಜಾರು ಆಗಲಿಲ್ಲ ಅವಳು ಮೊದಲಿನಂತೆ ತನ್ನ ಪಾಡಿಗೆ ಆರಾಮಾಗಿ ಇದ್ದಳು. ಆದರೆ ಆದರ್ಶ್ ಮತ್ತು ಆಕಾಶ್ ಮಾತ್ರ ತಮ್ಮ ತಂಗಿ ಬಂದು ಮಾತನಾಡುತ್ತಾಳೆ ಅವಳಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದುಕೊಂಡಿದ್ದರು. ಇಂತಹ ಅಣ್ಣಂದಿರು ಸಿಗುವುದಕ್ಕೆ ಎಷ್ಟು ಪುಣ್ಯ ಮಾಡಿರಬೇಕು ಆದರೆ ಅಣ್ಣಂದಿರ ಪ್ರೀತಿ ಕಾಳಜಿ ಆಕೆಗೆ ಅರ್ಥವೇ ಆಗುತ್ತಿರಲಿಲ್ಲ. 

ತಮ್ಮ ಮಗಳ ವರ್ತನೆಯಿಂದ ಅಪ್ಪ ಅಮ್ಮಗೂ ಕೂಡ ಬೇಜಾರು. ಎಷ್ಟು ಜಾಣೆ ಆದರೇನು ಈ ತರಹ ವರ್ತನೆ ಜಂಬ, ಸೊಕ್ಕು ಒಳ್ಳೆಯದಲ್ಲ. ಯಾವಾಗ ಇದರ ಅರಿವು ಆಕೆಗೆ ಆಗುತ್ತದೆ ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು.

ತಿಂಗಳುಗಳೇ ಕಳೆಯಿತು ಆದರೂ ಅಮೃತ ಅಣ್ಣಂದಿರ ಜೊತೆ ಮಾತನಾಡಲೇ ಇಲ್ಲ. ದಿನಗಳು ಕಳೆಯುತ್ತಿದ್ದವು ಆದರೆ ಆಕೆ ಮಾತ್ರ ಬದಲಾಗಲೇ ಇಲ್ಲ.

ಅಮೃತ ಸ್ನೇಹಿತೆ ಒಂದು ವಾರ ತರಗತಿಗೆ ಬರಲೇ ಇರಲಿಲ್ಲ ಆಕೆಗೆ ಏನಾಗಿರಬಹುದು ಎಂದು ತಿಳಿಯಲು ಆಕೆಯ ಮನೆಗೆ ಹೋದಳು, ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳ ಸ್ನೇಹಿತೆಯ ಅಣ್ಣ ತೀರಿ ಹೋಗಿದ್ದಾರೆ ಎಂದು. ತನ್ನ ಅಣ್ಣನನ್ನು ಕಳೆದುಕೊಂಡು ಬೇಸತ್ತು ಹೋಗಿದ್ದಳು ಆಕೆಯ ಸ್ನೇಹಿತೆ. ಕಣ್ಣುಗಳು ಕೆಂಪು ಕೆಂಪಾಗಿ ಹೋಗಿದ್ದವು ಅತ್ತು ಅತ್ತು, ಆಕೆಯನ್ನು ನೋಡುತಿದ್ದರೆ ನಮಗೂ ಕಣ್ಣು ತುಂಬಿ ಬರುವಂತಿತ್ತು. ನೋಡು ಅಮೃತ ನನಗಿದ್ದ ಒಬ್ಬ ಅಣ್ಣನನ್ನು ನಾನು ಕಳೆದುಕೊಂಡಿದ್ದೇನೆ ಆವನಿಗೆ ನಾನು ಎಂದರೆ ಜೀವ ಆದರೆ ಈಗ ಅವನೇ ನನ್ನ ಜೀವನದಿಂದ ದೂರ ಹೋಗಿದ್ದಾನೆ ಅವನಿಲ್ಲದೆ ನನಗೆ ಯಾವುದೂ ಬೇಡವಾಗಿದೆ ಅದಕ್ಕೆ ಕಾಲೇಜ್ ಕಡೆ ಬರಲು ಮನಸ್ಸು ಆಗುತ್ತಿಲ್ಲ, ನಿನಗೆ ನೋಡು ಇಬ್ಬರು ಅಣ್ಣಂದಿರು ಅದೆಷ್ಟು ಪ್ರೀತಿ ಮಾಡುತ್ತಾರೆ ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡ, ನನಗೆ ಗೊತ್ತು ನಿನಗೆ ಅಣ್ಣಂದಿರ ಬಗ್ಗೆ ಚೂರು ಪ್ರೀತಿ ಇಲ್ಲ ಆದರೆ ಅವರ ಪ್ರೀತಿಯ ಮನಸಿಗೆ ಎಂದೂ ನೋವು ಮಾಡಬೇಡ ಎಂದಳು ಅವಳ ಸ್ನೇಹಿತೆ. ಅಮೃತ ಏನೂ ಹೇಳದೆ ಹಾಗೆ ಸುಮ್ಮನೆ ಮನೆಗೆ ನಡೆದಳು. ಆ ದಿನ ರಾತ್ರಿ ಅಮೃತಗೆ ತನ್ನ ಅಣ್ಣ ಆಕಾಶ್ ಗೆ ರಸ್ತೆ ಅಪಘಾತ ಆಗಿ ಅವನು ಸಾಯುವ ಕನಸು ಬಿತ್ತು ಗಾಬರಿಯಿಂದ ಎಚ್ಚರವಾಗಿ ನಂತರ ತನ್ನ ಅಣ್ಣನ ಕೋಣೆಗೆ ಓಡಿ ಹೋಗುತ್ತಾಳೆ. ಅವಳ ಕಣ್ಣುಗಳು ತುಂಬಿ ಹೋಗಿದ್ದವು ತನ್ನ ಸ್ನೇಹಿತೆಗೆ ಆದಂತೆ ಅವಳಿಗೂ ಆಗಿ ಹೋಯಿತೇ ಅನ್ನುವ ಭಯ ಅವಳ ಕಣ್ಣಿನಲ್ಲಿ ಇತ್ತು. ಅಣ್ಣ ಕೋಣೆಯಲ್ಲಿ ಆರಾಮಾಗಿ ಮಲಗಿದ್ದನು ಕಂಡು ಸಮಾಧನಾಗೊಂಡಳು. ಮರುದಿನ ಬೆಳಗ್ಗೆ ತನ್ನ ಅಣ್ಣಂದಿರನ್ನು ಕರೆದು ಕ್ಷಮೆ ಕೇಳಿದಳು ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅತ್ತಳು. ಅಣ್ಣಂದಿರಿಗೆ ಆಶ್ಚರ್ಯ ಧಿಡೀರ್ ಆಗಿ ಹೇಗೆ ಈಕೆಗೆ ಎಲ್ಲಿಲ್ಲದ ಪ್ರೀತಿ ಬಂತು ಎಂದು. ಅವರ ನಂಬಿಕೆಯಂತೆ ಕಾಲವೇ ಅವಳಿಗೆ ಎಲ್ಲದರ ಅರಿವು ಮೂಡಿಸಿತು. ಅಪ್ಪ ಅಮ್ಮನಿಗೂ ತಮ್ಮ ಮಗಳ ಬದಲಾವಣೆಯಿಂದ ಖುಷಿ ಆಗಿತ್ತು. ಅಮೃತ ಪೂರ್ತಿಯಾಗಿ ಬದಲಾಗಿ ತನ್ನ ಅಣ್ಣಂದಿರ ಜೊತೆಗೆ ಖುಷಿಯಾಗಿ ಇದ್ದಳು.


ಇದೊಂದು ನನ್ನ ಕಲ್ಪನೆಯ ಕಥೆ ಅಷ್ಟೇ ಆದರೆ ನಿಜ ಜೀವನದಲ್ಲೂ ಹೀಗೆ ಆಗುತ್ತಾ ಇರುತ್ತದೆ. ಅಣ್ಣ - ತಂಗಿ ಆಗಿರಲಿ ಅಥವಾ ಯಾವುದೇ ಸಂಭಂಧಗಳು ಆಗಿರಲಿ ನಾವು ಅವರ ಜೊತೆ ಅನ್ಯೋನ್ಯವಾಗಿ ಇರಬೇಕು. ಇನ್ನೊಬ್ಬರು ನಮ್ಮ ಮೇಲೆ ತೋರಿಸುವ ಪ್ರೀತಿ, ಕಾಳಜಿಗೆ ಪ್ರತಿಯಾಗಿ ನಾವು ಅವರನ್ನು ಪ್ರೀತಿಯಿಂದ ಕಾಣಬೇಕು ಪ್ರೀತಿ ಇಲ್ಲವಾದರೂ ಅವರ ಭಾವನೆಗೆ ಮನಸ್ಸಿಗೆ ನೋವು ಉಂಟುಮಾಡಬಾರದು. ಕಳೆದುಕೊಂಡ ಮೇಲೆ ಅಥವಾ ದೂರ ಆದ ಮೇಲೆ ಅವರನ್ನು ನೆನೆದು ಆಳುವ ಬದಲು ನಾವು ಕಳೆದುಕೊಳ್ಳುವ ಮೊದಲೇ ಅವರ ಜೊತೆ ಚೆನ್ನಾಗಿ ಖುಷಿಯಾಗಿ ಇರಬೇಕು. 

Thursday, September 02, 2021

ಚಹಾ

 

 ಚಿತ್ರಕೃಪೆ - ಅಂತರ್ಜಾಲ

ಪ್ರತಿ ದಿನ ಆರಂಭವು ನಿನ್ನೊಂದಿಗೆ

ಸೋಲುವುದು ನಾಲಿಗೆ ನಿನ್ನ ರುಚಿಗೆ

ಪರಿಹಾರವು ನೀ ನೋವಿಗೆ

ನಿತ್ಯ ಉಪಹಾರವು ನಿನ್ನೊಂದಿಗೆ

ಜೊತೆಯಾಗಿರುವೆ ಒಂಟಿ ಬದುಕಿಗೆ

ಉಲ್ಲಾಸ ತುಂಬುವೆ ಮನಸಿಗೆ

ನಿನ್ನಿಂದ ಈ ಮೊಗದಲಿ ಕಿರುನಗೆ

ಮಿತವಾದ ಹಿತವಾದ

ಸಿಹಿಯಾದ ಸವಿಯಾದ

ಆ ಸ್ವಾದ

ಆಸ್ವಾದಿಸಲು ಆನಂದ