Wednesday, June 23, 2021

ನಾಳೆ ಮಾಡ್ತೀನಿ!

 ನಾಳೆ ಮಾಡ್ತೀನಿ!

ಅದೇನೇ ಕೆಲಸ ಇದ್ರು ನಾಳೆ ಮಾಡ್ತೀನಿ,ಮತ್ತೆ ಮಾಡ್ತೀನಿ ಅನ್ನೋದ್ರಲ್ಲೇ ಟೈಮ್ ವೇಸ್ಟ್ ಮಾಡ್ತೀವಿ. ಅದೆಷ್ಟು ಸೋಮಾರಿತನ ನಮಗೆ!
ನಾಳೆ  ನಾಳೆ ಅಂತ ಹೇಳಿದ್ದೆ ಬಂತು!  ಕೆಲವು ಕೆಲಸಗಳಂತೂ  ನಾಳೆ ನಾಳೆ ಎಂದು ಹೇಳಿ ಕೊನೆಗೆ ಮರೆವುಗಳ ಪಟ್ಟಿಯಲ್ಲಿ ಮೂಲೆ ಸೇರುತ್ತವೆ ಅಷ್ಟೇ!
ಕೆಲಸ ಎಷ್ಟೇ ಸುಲಭ ಆಗಿರ್ಲಿ ಅಥವಾ ಕಷ್ಟ ಆಗಿರ್ಲಿ  ನಾಳೆ ಮಾಡ್ತೀನಿ, ಆಮೇಲೆ ನೋಡ್ತೀನಿ ಬಿಡಿ ಅನ್ನೋದೇ ನಮ್ಮ ಖಾಯಂ ಉತ್ತರ ಆಗಿರುತ್ತೆ.
ಅದೊಂದು ಹಾಡು ಇದ್ಯಲ್ಲ ನಾಳೆ ಮಾಡುವ ಕೆಲಸ ಇಂದೇ ಮಾಡು ಆ ನಾಳೆ ಎಂಬ ಮಾತ ಮುಂದೆ ದೂಡು ಅಂತ, ಈ ಸಾಲುಗಳನ್ನು ಕೇಳ್ತಾ ಇದ್ರೆ ಆ ಕ್ಷಣಕ್ಕೆ  ಅನ್ಸುತ್ತೆ ನಾಳೆ ಮಾಡೋ ಕೆಲಸ ಇಂದೇ ಮಾಡಿ ಮುಗಿಸೋಣ ಅಂತ. ಬರೀ ಅನ್ಸೋದು ಅಷ್ಟೇ ! ನಾವು ಕೆಲಸ ಮಾಡೋಣ ಅಂತ ರೆಡಿ ಆದ್ರೆ  ನಮ್ಮ ತಲೆ ಏನು ಹೇಳುತ್ತೆ? ಇಂದು ಮಾಡೋ ಕೆಲಸ ನಾಳೆ ಮಾಡು ಈಗಿರೋ  ಈ ಕ್ಷಣವನ್ನು ಎಂಜಾಯ್ ಮಾಡು.. ಹೌದು ನಂಗಂತೂ ಹೀಗೆ ಅನ್ಸೋದು ಆಯ್ತಾ! ಹೀಗೆ ಅಂದುಕೊಂಡು ಮಜಾ ಏನೋ ಮಾಡ್ತೀವಿ ಆದ್ರೆ ಈ ಟೈಮ್ ಅನ್ನೋದು ನಮಗೆ ಚೆನ್ನಾಗಿ ಪಾಠ ಕಲಿಸುತ್ತೆ . ನಾವು ಈ ಕ್ಷಣ ಮಜಾ ಮಾಡಿದ್ರೆ ಮುಂದೆ ಅದರ ದುಪ್ಪಟ್ಟು ಕೆಲಸ  ಮಾಡುವಂತೆ ಮಾಡಿಸುತ್ತೆ.
ಒಂದೊಂದು ಸಲ ನಮಗೆ ಏನೋ ಕೆಲಸ ಮಾಡೋಣ ಅನ್ನೋ ಮನಸಾಗುತ್ತೆ ಆವಾಗ ನೋಡಿ ನಮಗೆ ಸಮಯದ ಅಭಾವ ಉಂಟಾಗುತ್ತದೆ.

ವಿದ್ಯಾರ್ಥಿ ಜೀವನದಲ್ಲಿ ಹೇಳಬೇಕಾದರೆ ಈ ನಾಳೆ ಮಾಡ್ತೀನಿ,ನಾಳೆ ಓದುತ್ತೀನಿ ಅನ್ನೋದು ಇದ್ದಿದ್ದೇ.  ಪರೀಕ್ಷೆಗೆ ಒಂದು ತಿಂಗಳು ಮೊದಲೇ ವೇಳಾಪಟ್ಟಿ ಕೊಟ್ಟಿದ್ದರು ಕೂಡ ಮತ್ತೆ ಓದುತ್ತೇನೆ ನಾಳೆ ಓದುತ್ತೇನೆ  ಅಂತ ಎಷ್ಟೋ ನಾಳೆಗಳನ್ನು ತಳ್ಳಿ ಆ ಓದೋ ನಾಳೆ ಬರೋದು ಪರೀಕ್ಷೆಯ ಹಿಂದಿನ ದಿನ ಮಾತ್ರ. ಪರೀಕ್ಷೆಯ ಬಗ್ಗೆ ಯಾವತ್ತೂ ಇಲ್ಲದ ಆ ಭಯ, ಆತಂಕ, ನಡುಕ ಹುಟ್ಟೋದು  ಆ ಪರೀಕ್ಷೆಯ ಹಿಂದಿನ ದಿನ ಮಾತ್ರ! ಅಯ್ಯೋ ನಾಳೆ ಪರೀಕ್ಷೆ, ಇವತ್ತು ನಾಳೆ ಅಂತ ಹೇಳಿ ಕೂತ್ರೆ ಪರೀಕ್ಷೆಯಲ್ಲಿ ಬರಿಯೋದು ಏನು ಅನ್ನೋ ಭಯ ಹುಟ್ಟುತ್ತೆ. ಇಷ್ಟೆಲ್ಲಾ ಆದ್ರೂ ನಾವು ಪ್ರತೀ ಪರೀಕ್ಷೆಯಲ್ಲಿ ಮಾಡೋದು ಇದನ್ನೇ.. ನಾಳೆ ನಾಳೆ ನಾಳೆ ಅಂತ ಹೇಳಿ, ನಾಳೆ ಪರೀಕ್ಷೆ ಅನ್ನೋ  ದಿನಕ್ಕೆ ಕಾಯೋದು..

ನಾಳೆ ಕೆಲಸ ಇವತ್ತು ಮಾಡಿಲ್ಲ ಅಂದ್ರು ಪರ್ವಾಗಿಲ್ಲ ಬಿಡಿ,  ಇವತ್ತಿನ ಕೆಲಸ  ನಾಳೆ ನಾಳೆ ಅಂತ  ಹೇಳಿ ಸುಮ್ನೆ ಟೈಮ್ ವೇಸ್ಟ್ ಮಾಡ್ಬೇಡಿ ಅಷ್ಟೇ.

12 comments: